Publish Date: Fri, 23 May 2008 (19:52 IST)
Updated Date: Wed, 16 Apr 2014 (15:50 IST)
ರಾಜ್ಯದಲ್ಲಿ ಜನತಾಪರಿವಾರ ಮತ್ತೆ ಒಂದಾಗುವುದೇ? ಹೌದು ಎನ್ನುವಂತೆ ಪ್ರತಿಕ್ರಿಯಿಸಿದ್ದಾರೆ ಜೆಡಿಯು ರಾಜ್ಯಾಧ್ಯಕ್ಷ ಸೋಮಶೇಖರ್.
ರಾಷ್ಟ್ರಮಟ್ಟದಲ್ಲಿ ಜೆಡಿಯು ಎನ್‌ಡಿಎ ಮೈತ್ರಿಕೂಟದಲ್ಲಿದೆ. ಆದರೆ ಮೈತ್ರಿಧರ್ಮ ಉಲ್ಲಂಘಿಸಿರುವ ಬಿಜೆಪಿ, ಮಿತ್ರಪಕ್ಷ ಜೆಡಿಯುನ ಬಸವರಾಜಬೊಮ್ಮಾಯಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದೆ. ಈ ವಿಷಯ ಇನ್ನೂ ಜೀವಂತವಿದೆ, ಈ ಬಗ್ಗೆ ರಾಷ್ಟ್ರಮಟ್ಟದಲ್ಲಿ ಮಾತುಕಗೆತೆ ನಡೆಯುತ್ತಿದ್ದು ಬಸವರಾಜಬೊಮ್ಮಾಯಿ ಅವರನ್ನು ಬಿಜೆಪಿಯಿಂದ ಉಚ್ಛಾಟಿಸದಿದ್ದರೆ ಎನ್‌ಡಿಎಯಿಂದ ಹೊರಬರಲಾಗುವುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ರಾಜ್ಯವಿಧಾನಸಭಾ ಚುನಾವಣೆ ನಡೆಯುವ ಮೊದಲು ಎನ್‌ಡಿಎ ಮೈತ್ರಿಧರ್ಮದಂತೆ ಜೆಡಿಯು ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಬಿಜೆಪಿ ಹಿಂದೇಟು ಹಾಕಿತು. ಕೊನೆಗೆ ಕಾಟಾಚಾರಕ್ಕೆಂಬಂತೆ ಐದು ಸೀಟು ಕೊಡುವುದಾಗಿ ಹೇಳಿದಾಗ ಮೈತ್ರಿ ಮುರಿದು ಬಿತ್ತು. ಇದೀಗ ತನ್ನ ಹಾದಿ ಬದಲಿಸಲು ಯೋಚಿಸುತ್ತಿರುವ ಜೆಡಿಯು ಎನ್‌ಡಿಎಯಿಂದ ಹೊರಬಂದು ಜನತಾ ಪರಿವಾರ ಒಗ್ಗೂಡಿಸುವತ್ತ ಚಿಂತನೆ ನಡೆಸಿದೆ.
ಈ ಬಗ್ಗೆ ಸೋಮಶೇಖರ್ ಅವರನ್ನು ಪ್ರಶ್ನಿಸಿದಾಗ ರಾಷ್ಟ್ರಮಟ್ಟದಲ್ಲಿ ಈ ಬಗ್ಗೆ ಪ್ರಯತ್ನ ನಡೆಯಬೇಕು ಎಂದು ಸಕಾರಾತ್ಮಕವಾಗಿ ಪ್ರತಿಕ್ರಿಸಿಯಿದ್ದಾರೆ.