Select Your Language

Notifications

webdunia
webdunia
webdunia
webdunia

ಗೆದ್ದ ಮತದಾರ; ಸೋತ ಕುತಂತ್ರ

ಗೆದ್ದ ಮತದಾರ; ಸೋತ ಕುತಂತ್ರ
, ಸೋಮವಾರ, 26 ಮೇ 2008 (12:32 IST)
ಚಂದ್ರಾವತಿ ಬಡ್ಡಡ್ಕ
NRB
ಈ ಚುನಾವಣೆಯಲ್ಲಿ ಯಾವುದಾದರು ಒಂದು ಪಕ್ಷ ಇಡಿಯಾಗಿ ಗೆದ್ದರೆ ಸಾಕಪ್ಪೋ ಸಾಕು ಎಂಬುದು ಹೆಚ್ಚಿನೆಲ್ಲರ ಆಕಾಂಕ್ಷೆಯಾಗಿತ್ತು. ರಾಜ್ಯದಲ್ಲಿನ ಕುತಂತ್ರ ರಾಜಕಾರಣ ವಾಕರಿಕೆ ತರಿಸಿದ್ದು, ಅದೋ-ಇದೋ, ಯಾವುದಾದರೂ ಒಂದೇ ಪಕ್ಷಕ್ಕೆ ಬಹುಮತ ದೊರೆಯಲಿ ಎಂಬ ಪರಿಸ್ಥಿತಿ ಕರ್ನಾಟಕದಲ್ಲಿ ನಿರ್ಮಾಣವಾಗಿತ್ತು.

ಹದಿಮೂರನೆಯ ವಿಧಾನಸಭಾ ಚುನಾವಣೆಯ ಅಂತಿಮ ಫಲಿತಾಂಶದ ಬಳಿಕದ ಪರಿಸ್ಥಿತಿಯಲ್ಲಿ ಬಿಜೆಪಿಗೆ ಸ್ಪಷ್ಟಬಹುಮತಕ್ಕೆ ಮೂರು ಸೀಟುಗಳು ಕಡಿಮೆಯಾದರೂ, ಅಮ್ಮಬ್ಬಾ ಎಂಬಂತೆ ಅಂಚಿನಲ್ಲಿ ಬಂದು ನಿಂತಿರುವ ಇದಕ್ಕಿನ್ನು, ಬಹುಮತಕ್ಕೆ ಬೇಕಿರುವ ಮೂರು ಸಂಖ್ಯೆ ಹೊಂಚಿಕೊಳ್ಳುವುದು ಕಷ್ಟವೇನಲ್ಲ. ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಸ್ವಂತ ಸಾಮರ್ಥ್ಯದ ಮೇಲೆ ಗೆದ್ದ ಬಿಜೆಪಿ, ಯುಡಿಯೂರಪ್ಪರ ದ್ವಿತೀಯ ಬಾರಿಯ ಪಟ್ಟಾಭಿಷೇಕಕ್ಕೆ ತಯ್ಯಾರಿ ನಡೆಸಿದೆ.

ಈ ಬಾರಿಯ ಫಲಿತಾಂಶಗಳನ್ನು ಗಮನಿಸಿದರೆ, ಮತದಾರ ಬುದ್ಧಿವಂತಿಕೆ ಮೆರೆದಿದ್ದಾನೆ ಎಂಬುದು ಸ್ಪಷ್ಟ. ಘಟಾನುಘಟಿ ರಾಜಕಾರಣಿಗಳೆಲ್ಲ ಮಣ್ಣುಮುಕ್ಕಿದ್ದಾರೆ. ಅಂತೆಯ ಥಳುಕು-ಬಳುಕಿಗೂ ಮಣೆಹಾಕಿಲ್ಲ. ಗಿನ್ನೆಸ್ ದಾಖಲೆ ಬರೆಯಹೊರಟ ಧರಂ ಸಿಂಗರ ದಾಖಲೆ ಹುಮ್ಮಸ್ಸು ಗುಳುಂ ಆಗುವಂತೆ ಮಾಡಿದ್ದಾನೆ. ಕನ್ನಡದ ಹೆಸರು ಹೇಳುತ್ತಾ, ಕತ್ತೆಯ ಮೇಲೆ ಸವಾರಿ ಮಾಡುತ್ತಾ ಜಾಗಟೆ ಬಡಿಯುತ್ತಿದ್ದ ವಾಟಾಳ್ ನಾಗರಾಜ್ ಕ್ಷೇತ್ರದ ಜನತೆ, ವಾಟಾಳ್ ಅವರು ಠೇವಣಿ ಕಳೆದುಕೊಳ್ಳುವಂತೆ ಮಾಡಿದ್ದು, ಮತದಾರರು 'ಕತ್ತೆ'ಗಳಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ.

ಶಿಕಾರಿಪುರ
webdunia
NRB

ಚುನಾವಣೆ ಘೋಷಣೆಯಾಗುತ್ತಲೇ ರಾಷ್ಟ್ರದ ಗಮನಸೆಳೆದದ್ದು ಶಿಕಾರಿಪುರ ಕ್ಷೇತ್ರ. ಇಬ್ಬರು ಮಾಜಿ ಮುಖ್ಯಮಂತ್ರಿಗಳು ಕಣಕ್ಕಳಿದಿದ್ದು ಮದ್ದಾನೆಗಳ ಹೋರಾಟ, ಕೆಲವರಲ್ಲಿ ಅತೀವ ಕುತೂಹಲ, ಮತ್ತೆ ಕೆಲವರಲ್ಲಿ ಕಳವಳ, ಇನ್ನೂ ಕೆಲವರಲ್ಲಿ ಆತಂಕ ಮೂಡಿಸಿತ್ತು. ಯಡಿಯೂರಪ್ಪರನ್ನು ಶತಾಯ ಗತಾಯ ಸೋಲಿಸಲೇಬೇಕೆಂದು ಹರಕೆ ಹೊತ್ತವರಂತೆ, ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರಲೇ ಇಲ್ಲ. ಸಮಾಜವಾದಿ ಪಕ್ಷದಿಂದ ಸ್ಫರ್ಧಿಸಿದ್ದ ಬಂಗಾರಪ್ಪ ಈ ಹಿಂದೆ ಯಾವಾಗಲೋ ಮಾಡಿದ್ದ ಉಪಕಾರವನ್ನು ಸ್ಮರಿಸಿಕೊಂಡ ದೇವೇಗೌಡರು, ಯಡಿಯೂರಪ್ಪರನ್ನು ಸೋಲಿಸಲು ತನ್ನ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ ಎಂಬ ಹೇಳಿಕೆ ನೀಡಿದ್ದರು. ಏತನ್ಮಧ್ಯೆ, ಪಕ್ಷದೊಳಗಿನ ವಿರೋಧಿಗಳೂ ಯಡಿಯೂರಪ್ಪ ಸೋಲಬೇಕೆಂದು ಒಳಗಿಂದೊಳಗೆ ಹುಳಹುಳ ಅಂದದ್ದೂ ಸುಳ್ಳಲ್ಲ. ಇದನ್ನೇ ಪ್ರತಿಷ್ಠೆ ವಿಷಯವಾಗಿ ತೆಗೆದುಕೊಂಡ ಯಡಿಯೂರಪ್ಪ, ಮತದಾರ 'ದೇವರ' ಮೇಲೆ ಭಾರ ಹಾಕಿ ಪ್ರಚಾರಕ್ಕಿಳಿದಿದ್ದರು.

ತನ್ನ ಸ್ವಂತ ಕ್ಷೇತ್ರ ಸೊರಬವನ್ನು ಬಿಟ್ಟು ಶಿಕಾರಿಪುರಕ್ಕೆ ಓವರ್‌ಕಾನ್ಫಿಡೆನ್ಸಿನೊಂದಿಗೆ ತೆರಳಿದ್ದ ಬಂಗಾರಪ್ಪ 45,750 ಮತಗಳಿಂದ ಸೋತರು. ನೀವು ಒಬ್ಬ "ಮುಖ್ಯಮಂತ್ರಿ ಅಭ್ಯರ್ಥಿಗೆ ಮತಹಾಕುತ್ತೀರಿ" ಎಂಬುದಾಗಿ ಮತದಾರರ ಬಳಿ ಬೇಡಿಕೊಂಡ ಯಡಿಯೂರಪ್ಪರ ತಂತ್ರ ಫಲಿಸಿತು. ಗೆದ್ದರು.

ಕುಟುಂಬ ರಾಜಕೀಯಕ್ಕೆ ಮಣೆ ಇಲ್ಲ!
webdunia
NRB
"ನಾನಿಲ್ಲದೆ ಅದ್ಯಾರು ಸರಕಾರ ರಚಿಸುತ್ತಾರೋ ನೋಡ್ತೀನಿ" ಎಂದು ಮತದಾರರು ಯಾವಾಗಲೂ ಹುಂಬರು ಎಂಬಂತೆ ಸಡಿಲ ಮಾತುಗಳನ್ನು ಆಡಿದ್ದ ದೇವೇಗೌಡರೀಗ ಗಾಯ ನೆಕ್ಕಿಕೊಳ್ಳಬೇಕಾಗಿದೆ. ಈ ಚುನಾವಣೆಯಲ್ಲಿ ಅತ್ಯಂತ ಹೀನಾಯ ಸೋಲು ವಿದಳಗೊಂಡ ಜನತಾದಳದ್ದು. ಕಳೆದ ಬಾರಿ 58 ಸ್ಥಾನಗಳಲ್ಲಿ ಗೆಲ್ಲಿಸಿದ್ದ ಮತದಾರನಿಗೆ ಅವಮಾನಿಸಿದ ಜೆಡಿಎಸ್‌ಗೆ ಶಾಸ್ತಿಯಾಗಿದೆ. ಅದು ಗೆದ್ದಿದ್ದು ಬರಿಯ 28 ಸ್ಥಾನಗಳು ಮಾತ್ರ. ಜನತೆಗೆ ಉತ್ತಮ ಕಾರ್ಯ ನೀಡಲು ಮುತುವರ್ಜಿ ವಹಿಸಿದ್ದ, ಅಭಿವೃದ್ದಿ ರಾಜಕಾರಣಕ್ಕೆ ಹೊರಟಿದ್ದ ಕುಮಾರಸ್ವಾಮಿಗೂ ಮೂಗುದಾರ ತೊಡಿಸಿದ್ದ ದೇವೇಗೌಡರ ಕುಟುಂಬ ರಾಜಕಾರಣ ಚಿಂದಿ.

ಅಂತೆಯೇ ಬಂಗಾರಪ್ಪರ ಕುಟುಂಬ ರಾಜಕೀಯವೂ ಪುಡಿಪುಡಿ. ತನ್ನ ಮಗನ ವಿರುದ್ಧವೇ ಇನ್ನೊಬ್ಬ ಮಗನನ್ನು ಎತ್ತಿ ಕಟ್ಟಿದ್ದ ಬಂಗಾರಪ್ಪ, ತಾನೂ ಸೋತು, ತನ್ನ ಮಕ್ಕಳನ್ನು ಸೋಲಿಸುವಲ್ಲಿ ಗೆದ್ದಿದ್ದಾರೆ.

ತಪ್ಪು ಲೆಕ್ಕಾಚಾರ ಹಾಕಿದ ಎಂ.ಪಿ.ಪ್ರಕಾಶ್
webdunia
NRB
ದೇವೇಗೌಡರೊಂದಿಗೆ ಮುನಿಸಿಕೊಂಡು ಜೆಡಿಎಸ್‌ನಿಂದ ಹೊರಬಂದ ಎಂ.ಪಿ.ಪ್ರಕಾಶ್, ಅಳೆದೂ ಸುರಿದೂ ಕಾಂಗ್ರೆಸ್ ಸೇರಿದರು. ಆದರೆ, ಅವರ ಅಳತೆ ಸರಿಯಾಗದೆ ಸೋರಿ ಹೋಯ್ತು. ತಮ್ಮಬೆಂಬಲಿಗರೊಂದಿಗೆ ಜೆಡಿಎಸ್‌ನಿಂದ ಹೊರಬಂದವರು ನೇರ ಬಿಜೆಪಿಗೆ ಹೋಗುತ್ತಿದ್ದರೆ ಅವರಿಗೊಂದು ಆಯಕಟ್ಟಿನ ಪಟ್ಟ ದಕ್ಕುತ್ತಿತ್ತು. ಆದರೆ ಸುಸಂಸ್ಕೃತ, ಸಜ್ಜನ ರಾಜಕಾರಣಿ ಎಂದೆಲ್ಲ ಕರೆಸಿಕೊಂಡ ಎಂ.ಪಿ. ನಿರ್ಧಾರ ಕೈಕೊಟ್ಟಿತು.

ಅತ್ತು ಗೆದ್ದವರು
webdunia
NRB

ಚುನಾವಣೆ ಘೋಷಣೆಯಾಗುತ್ತಿದ್ದಂತೆ ತಮ್ಮ ಕ್ಷೇತ್ರಕ್ಕೆ ಹೋದ ಕೆಲವು ಪ್ರಮುಖ ರಾಜಕಾರಣಿಗಳಿಗೆ ಮತದಾರರನ್ನು ಕಾಣುತ್ತಲೇ ಭಾವನೆ ಉಕ್ಕಿಬಂದು, ಕಣ್ಣಿಂದ ಗಳಗಳನೆ ಕಣ್ಣೀರು ಹರಿಯಿತು. ತಮ್ಮ ನಾಯಕ ಅಳುತ್ತಿರುವಾಗ ಕಾರ್ಯಕರ್ತರು ಅಳದಿರಲಾಗುತ್ತದೆಯೇ, ಅವರೂ ಅತ್ತರು. ಹೀಗೆ ಅತ್ತ ವರುಣಾ ಕ್ಷೇತ್ರದ ಅಭ್ಯರ್ಥಿ ಸಿದ್ಧರಾಮಯ್ಯ, ರಾಮನಗರ ಕ್ಷೇತ್ರದ ಕುಮಾರಸ್ವಾಮಿ, ಚಿತ್ತಾಪುರ ಕ್ಷೇತ್ರದ ಮಲ್ಲಿಕಾರ್ಜುನ ಖರ್ಗೆ ಗೆದ್ದರು. ಅವತ್ತು ಮತದಾರರ ಎದುರು 'ಗಹಗಹಿಸಿ' ಅತ್ತ ಇವರೆಲ್ಲ ಇಂದು ಗೆದ್ದರೂ, ಚುನಾವಣಾ ಫಲಿತಾಂಶ ಮಾತ್ರ ಈ ಮೂವರೂ 'ಬಿಕ್ಕಿಬಿಕ್ಕಿ' ನಗುವಂತೆ ಮಾಡಿದೆ.

ಸೋತು ಹೋದ ಘಟಾನುಘಟಿಗಳು
webdunia
NRB
ಸೋತು ಹೋದವರಲ್ಲಿ ಈ ಸರ್ತಿ ಅನೇಕ ಪ್ರಮುಖರು ಸೇರಿದ್ದಾರೆ ಇವರಲ್ಲಿ ಅತ್ಯಂತ ತೂಕದವರು ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್, ಇನ್ನೋರ್ವ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ, ಕಾಂಗ್ರೆಸ್ ಮುಖಂಡ ಹಳಿಯಾಳ ಅಭ್ಯರ್ಥಿ ಆರ್.ವಿ.ದೇಶಪಾಂಡೆ, ಎಚ್.ಕೆ ಪಾಟೀಲ್. ಇವರೆಲ್ಲ ಢಮಾರ್! ಶೃಂಗೇರಿ ಕ್ಷೇತ್ರದ ಡಿ.ಬಿ. ಚಂದ್ರೇಗೌಡ, ಈ ಬಾರಿ ಕಾಂಗ್ರೆಸ್ ಸೇರಿ ಕುಂದಾಪುರದ ಹಳೆಹುಲಿ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಎದುರು ಸ್ಫರ್ಧಿಸಿರುವ ಜಯಪ್ರಕಾಶ್ ಹೆಗ್ಡೆ, ಪುತ್ತೂರಿನಲ್ಲಿ ಬಿಜೆಪಿ ವಿರುದ್ಧ ಬಂಡಾಯ ಎದ್ದ ಶಕುಂತಳಾ ಶೆಟ್ಟಿ ಆಘಾತಕಾರಿ ಸೋಲು ಕಂಡಿದ್ದಾರೆ. ಜೆಡಿಎಸ್ ವಕ್ತಾರರಾಗಿದ್ದ ವೈ.ವಿ.ಎಸ್.ದತ್ತಾ, ಜೆಡಿಎಸ್ ಅಧ್ಯಕ್ಷ ಮೆರಾಜುದ್ದೀನ್ ಪಟೇಲ್ ಸೋತಿದ್ದಾರೆ. ಪಟೇಲ್ ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದರು. ಇವರ ಸಾಲಿಗೆ ರಮೇಶ್ ಜಿಗಜಿಣಗಿ, ಕಮರುಲ್ ಇಸ್ಲಾಂ ಅವರೂ ಸೇರಿದ್ದಾರೆ. ಮಾಜಿ ಪೊಲೀಸಧಿಕಾರಿ ರೇವಣಸಿದ್ಧಯ್ಯ ಚುನಾವಣಾ ಅಭ್ಯರ್ಥಿಯಾಗಿ ಗೆಲ್ಲಲಿಲ್ಲ.

ಗಣಿಧಣಿ ಅನಿಲ್ ಲಾಡ್, ಸಾಗರ ಕ್ಷೇತ್ರದಿಂದ ಕಾಗೋಡು ತಿಮ್ಮಪ್ಪ, ಬೆಂಕಿ ಮಹಾದೇವು, ಬಂಗಾರಪ್ಪ ಪುತ್ರದ್ವಯರಾದ ಕುಮಾರ್ ಬಂಗಾರಪ್ಪ ಮತ್ತು ಮಧುಬಂಗಾರಪ್ಪ, ಬಸವರಾಜ ಪಾಟೀಲ್ ಯತ್ನಾಳ್ ಇವರನ್ನೆಲ್ಲ ಮತದಾರ ನಿರಾಕರಿಸಿದ್ದಾನೆ. ಈ ಮಧ್ಯೆ ಪ್ರತಿಭಟನೆ ಖ್ಯಾತಿಯ ವಾಟಾಳ್ ನಾಗರಾಜ್‌ಗೆ ಠೇವಣಿ ಉಳಿಸಿಕೊಳ್ಳಲೂ ಮತದಾರ ಅವಕಾಶ ನೀಡಿಲ್ಲ.

ನಡೆಯದ ಗಾಂಧಿಗಿರಿ
ಕಳೆದ ಬಾರಿಯ ಜೆಡಿಎಸ್-ಬಿಜೆಪಿ ಮೈತ್ರಿ ಕೂಟದ ಟ್ವೆಂಟಿ20 ಒಪ್ಪಂದದ ಪ್ರಕಾರ, ತನ್ನ ಅಧಿಕಾರಾವಧಿ ಮುಗಿಯುತ್ತಲೇ ಬಿಜೆಪಿಗೆ ಕೊಟ್ಟಮಾತಿನಂತೆ ನಡೆದುಕೊಳ್ಳದ ಜೆಡಿಎಸ್‌ ನಡವಳಿಕೆಯಿಂದ ಬೇಸರಗೊಂಡು ಪಕ್ಷ ತ್ಯಜಿಸಿ ತನ್ನದೇ ಸುವರ್ಣಯುಗ ಪಕ್ಷಕಟ್ಟಿ ಗಾಂಧೀಗಿರಿ ದಾರಿ ಹಿಡಿದಿದ್ದ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಾಟೀಲ್ ಪುತ್ರ ಮಹಿಮಾ ಪಾಟೀಲ್ ಸೋತಿದ್ದಾರೆ.

ಥಳುಕು ಬಳುಕು
webdunia
PTI

ಚುನಾವಣೆ ಇಳಿದ ಸಿನಿಮಾ ಮಂದಿ ಮತದಾರರಿಗೆ ಯಾಕೋ ಪಥ್ಯವಾದಂತೆ ಕಂಡಿಲ್ಲ. ಕಾಂಗ್ರೆಸ್‌ನ 'ತರ್ಲೆ ನನ್ಮಗ' ಜಗ್ಗೇಶ್ ಟಿಕೆಟ್ ಸಿಗದಾಗ ಅತ್ತೂ ಕರೆದು ಮಾಡಿದ 'ತರ್ಲೆ' ಗೆದ್ದಿದ್ದು ಬಿಟ್ಟರೆ, ಉಳಿದವರೆಲ್ಲ ಗೋತಾ! ಮಂಡ್ಯದ ಗಂಡು ಅಂಬರೀಷ್ ಸೋತಿದ್ದಾರೆ. ಅಂಬರೀಷ್ ತಾನು ಗೆದ್ದೇ ಗೆಲ್ಲುತ್ತೇನೆಂಬ ಉಡಾಫೆಯಿಂದ ತನ್ನ ಕ್ಷೇತ್ರದಲ್ಲಿ ಪ್ರಚಾರವನ್ನೂ ಮಾಡಿರಲಿಲ್ಲ. ಬದಲಿಗೆ ಬೇರೆ ಕ್ಷೇತ್ರಕ್ಕೆ ಪ್ರಚಾರಕ್ಕೆ ತೆರಳಿದ್ದರು. ಮತದಾರನ ಸಹನೆಗೂ ಮಿತಿ ಇರುತ್ತೆ ಅಲ್ವಾ?

ಉಳಿದಂತೆ, ಬಿ.ಸಿ.ಪಾಟೀಲ್ ಹೊರತುಪಡಿಸಿದರೆ, ನಟನಾ ಕೌಶಲ್ಯ ಮೆರೆದ ಚಳ್ಳಕೆರೆಯ ಶಶಿಕುಮಾರ್, ಸಾಯಿಕುಮಾರ್, ಕಾಂಗ್ರೆಸ್‌ನ ಉಮಾಶ್ರೀ ಸೋತಿದ್ದಾರೆ.

ಬೆರಳೆಣಿಕೆಯ ಮಹಿಳೆಯರು
ಮಹಿಳೆಯರಿಗೆ ಮೀಸಲಾತಿ, ಆದ್ಯತೆ ಎಂಬೆಲ್ಲ ಏನೇ ಬೊಬ್ಬೆ ಇದ್ದರೂ, ಗೆದ್ದವರು ಮಾತ್ರ ಬರಿಯ ಮೂರು ಮಂದಿ ಮಹಿಳೆಯರು. ಈ ಮೂರೂ ಮಂದಿಯೂ ಬಿಜೆಪಿ ಅಭ್ಯರ್ಥಿಗಳು. ಪುತ್ತೂರು ಕ್ಷೇತ್ರದ ಮಲ್ಲಿಕಾ ಪ್ರಸಾದ್ ಭಂಡಾರಿ, ಬೆಂಗಳೂರು ಯಶವಂತಪುರ ಕ್ಷೇತ್ರದ ಶೋಭಾ ಕರಂದ್ಲಾಜೆ ಮತ್ತು ಧಾರವಾಡ ಕ್ಷೇತ್ರದ ಸೀಮಾ ಅಶೋಕ್ ಮಸೂತಿ ಅವರುಗಳು ಮಾತ್ರ ಗೆಲುವಿನ ಮುಖ ಕಂಡಿದ್ದಾರೆ.

webdunia
PTI
ಒಟ್ಟಾರೆಯಾಗಿ ಹೇಳುವುದಾದರೆ, ಈ ಬಾರಿಯ ಸ್ಫರ್ಧೆ, ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ. ಬಿಎಸ್ಪಿಯ ಮಾಯಾವತಿಯ ಮಾಯೆ ಮಾಯವಾಗಿದೆ. ಸಮಾಜವಾದಿ ಪಕ್ಷದ ಸೈಕಲ್ ಪಂಕ್ಚರ್. ಗೆದ್ದ ಇತರರೂ ಕಾಂಗ್ರೆಸ್ ಮತ್ತು ಬಿಜೆಪಿಯ ಬಂಡುಕೋರರು.

ಮತದಾರ ಬುದ್ಧಿವಂತನಾಗಿದ್ದಾನೆ ಮತ್ತು ಗೆದ್ದಿದ್ದಾನೆ!

Share this Story:

Follow Webdunia kannada