ದಕ್ಷಿಣ ಭಾರತದಲ್ಲಿ ಖಾತೆ ಆರಂಭಿಸುವ ಬಿಜೆಪಿಯ ಕನಸು ನನಸಾಗುತ್ತಿದ್ದು, ಮೇ 28ರ ಬುಧವಾರ ಬಿಜೆಪಿ ಸರಕಾರ ಅಧಿಕಾರ ವಹಿಸಿಕೊಳ್ಳಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ಬಿ.ಎಸ್.ಯಡಿಯೂರಪ್ಪ ಅವರು ಬುಧವಾರದಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿಸಿರುವ ಮೂಲಗಳು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿವೆ. ಹಾಗಾಗಿ ಅವರೊಂದಿಗೆ ಪ್ರಮಾಣ ವಚನ ಸ್ವೀಕರಿಸಲಿರುವ ಇತರರು ಯಾರೆಂದು ತಕ್ಷಣಕ್ಕೆ ಗೊತ್ತಾಗಿಲ್ಲ.
224 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ, 110 ಸ್ಥಾನಗಳನ್ನು ಗೆದ್ದಿರುವ ಬಿಜೆಪಿಗೆ ಸ್ಪಷ್ಟಬಹುಮತಕ್ಕೆ ಇನ್ನೂ ಮೂರು ಸ್ಥಾನಗಳ ಅಗತ್ಯ ಇದೆ. ಆದರೆ ಗೆದ್ದಿರುವ ಆರು ಪಕ್ಷೇತರರಲ್ಲಿ ನಾಲ್ವರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಆದರೆ ಅವರು ನಮ್ಮ ಬಂಡುಕೋರರು ಎಂದಷ್ಟೇ ಹೇಳಿರುವ ಮೂಲಗಳು, ಬೆಂಬಲ ನೀಡುವ ಪಕ್ಷೇತರರ ಹೆಸರು ಹೇಳಲು ನಿರಾಕರಿಸಿವೆ.
ಚುನಾವಣಾ ಪ್ರಕ್ರಿಯೆಗಳು ಮೇ 28ರಂದು ಅಂತಿಮಗೊಳ್ಳಲಿದ್ದು, ಆ ದಿನ ಚುನಾವಣಾ ಆಯೋಗವು 13ನೆ ವಿಧಾಸಭಾ ಕ್ಷೇತ್ರದ ಸಂವಿಧಾನದ ಅಧಿಸೂಚನೆ ಹೊರಡಿಸುವ ನಿರೀಕ್ಷೆ ಇದೆ.