Select Your Language

Notifications

webdunia
webdunia
webdunia
webdunia

ದೀಪಾವಳಿಯಲ್ಲಿ ಗೋಪೂಜೆಯ ಮಹತ್ವ...

ದೀಪಾವಳಿಯಲ್ಲಿ ಗೋಪೂಜೆಯ ಮಹತ್ವ...
ರಜನಿ ಭಟ್
NRB
ದೀಪಗಳ ಹಬ್ಬ ದೀಪಾವಳಿ. ದೀಪಾವಳಿ ಸಂಭ್ರಮದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಗೋ ಪೂಜೆ ಕೂಡ ಪ್ರಮುಖ ಸ್ಥಾನವನ್ನು ಪಡೆದಿದೆ. ಮನೆಯಲ್ಲಿರುವ ದನ ಕರುಗಳಿಗೆ ಅಲಂಕರಿಸಿ, ಅವುಗಳಿಗೆ ಶಾಸ್ತ್ರೋಕ್ತ ಪೂಜೆ ಮಾಡಿ, ತಿಂಡಿತಿನಿಸುಗಳನ್ನು ನೀಡುವ ಸಂಪ್ರದಾಯವು ಈಗಲೂ ನಡೆದು ಬಂದಿದೆ. ನಾವು ಆಚರಿಸುವ ಪ್ರತಿಯೊಂದು ಸಂಪ್ರದಾಯಕ್ಕೂ ಒಂದೊಂದು ಹಿನ್ನೆಲೆ ಇರುವಂತೆ ದೀಪಾವಳಿಯ ಸಮಯದಲ್ಲಿನ ಗೋ ಆರಾಧನೆಗೂ ಒಂದು ಪೌರಾಣಿಕ ಹಿನ್ನೆಲೆ ಇದೆ.

ಈ ಹಿನ್ನೆಲೆಯ ಪ್ರಕಾರ, ಹಿಂದೆ ಬಲಿಚಕ್ರವರ್ತಿಯು ವಾಮನರೂಪಿ ವಿಷ್ಣುಗೆ ದಾನ ನೀಡುವಾಗ ವಾಮನನು ತನ್ನ ಮೂರನೆಯ ಹೆಜ್ಜೆಯನ್ನು ಬಲಿ ಚಕ್ರವರ್ತಿಯ ತಲೆ ಮೇಲೆ ಇಟ್ಟನು. ಆ ಸಮಯದಲ್ಲಿ ಬಲಿ ಚಕ್ರವರ್ತಿಯಲ್ಲಿ ವಾಮನನು ಯಾವುದಾದರೊಂದು ವರವನ್ನು ಕೇಳೆಂದಾಗ ಬಲಿಚಕ್ರವರ್ತಿಯು ಪ್ರತಿವರ್ಷವು ಒಂದು ದಿನ ತಾನು ಭೂಮಿಗೆ ಆಗಮಿಸಿಬೇಕೆಂದು, ಭೂಮಿಯಲ್ಲಿ ತನ್ನ ನೆನಪಿಗಾಗಿ ಆ ದಿನವನ್ನು ಆಚರಿಸಬೇಕು ಎಂಬುದಾಗಿ ಕೇಳಿದನು. ಅಲ್ಲದೆ, ಆ ದಿನವು ತನ್ನ ಸಾಮ್ರಾಜ್ಯದಲ್ಲಿರುವಂತೆಯೇ, ಸರ್ವ ಸಮೃದ್ಧಿ ಪರಿಪಾಲನೆಯಿಂದ ಕೂಡಿರಬೇಕೆಂದು ಆಶಿಸಿದನು.

ಅದರಂತೆಯೇ, ದೀಪಾವಳಿಯ ವೇಳೆ ಒಂದು ದಿನವನ್ನು ಬಲಿಪಾಡ್ಯಮಿ ಎಂದು ಬಲಿ ಚಕ್ರವರ್ತಿಯ ನೆನಪಿಗಾಗಿ ಆಚರಿಸಲಾಗುತ್ತದೆ. ಈ ದಿನ ಲಕ್ಷ್ಮೀ ಪೂಜೆ, ಗೋ ಪೂಜೆ, ಇವುಗಳನ್ನು ಮಾಡಲಾಗುವುದು. ಯಾಕೆಂದರೆ, ಬಲಿಚಕ್ರವರ್ತಿಯ ಸಾಮ್ರಾಜ್ಯದಲ್ಲಿ ಗೋವುಗಳಿಗೆ ಅತಿಯಾದ ಮಹತ್ವ ನೀಡಲಾಗುತ್ತಿತ್ತು. ಅದಕ್ಕೆ ಪೂಜೆಗಳನ್ನು, ಆರಾಧನೆಯನ್ನು ಮಾಡಲಾಗುತ್ತಿತ್ತು. ಅದರ ಸವಿನೆನಪಿಗಾಗಿ ಬಲಿಪಾಡ್ಯಮಿ ದಿವಸ ಗೋವುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.

ಇನ್ನು ಹೆಚ್ಚಿನ ಕಡೆಗಳಲ್ಲಿ ಆ ದಿನದಂದು ಹಸುವಿನ ಹಾಲನ್ನೂ ಕರೆಯಬಾರದೆಂಬ ಪ್ರತೀತಿ ಇದೆ. ಕರುಗಳು ಬೇಕಾದಷ್ಟು ಹಾಲು ಕುಡಿದು ಸಂತೋಷವಾಗಿರಬೇಕೆಂಬುದು ಇದರ ಉದ್ದೇಶ.

ಸರ್ವಸಮೃದ್ಧಿಯುಂಟಾಗಿ, ಧನಕನಕಗಳು ವೃದ್ಧಿಯಾಗುವಂತೆ ಇದೇ ದಿನ ಧನಲಕ್ಷ್ಮಿ ಪೂಜೆಯ ಮೂಲಕ ಲಕ್ಷ್ಮಿಯನ್ನು ಒಲಿಸಿಕೊಳ್ಳಲಾಗುತ್ತದೆ. ಈ ರೀತಿ ಮಾಡುವುದರಿಂದ ಬಲಿ ಚಕ್ರವರ್ತಿಯ ರಾಜ್ಯದಲ್ಲಿದ್ದಂತೆ ಎಲ್ಲಾ ಸುಖೋಪಭೋಗಗಳು ದೊರೆಯುವುದು ಎಂಬ ನಂಬಿಕೆ ಜನರಲ್ಲಿದೆ.

ಒಟ್ಟಾರೆ ಮೂರು ದಿನಗಳ ಕಾಲ ನಡೆಯುವ ದೀಪಾವಳಿ ಸಂಭ್ರಮದಲ್ಲಿ ಗೋ ಪೂಜೆ ಕೂಡ ಪ್ರಾಮುಖ್ಯತೆ ಪಡೆದುಕೊಂಡಿದ್ದು, ಇದು ಭೂಲೋಕದ ಕಾಮಧೇನುವಿಗೆ ನೀಡಿದ ಮಹತ್ವವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

Share this Story:

Follow Webdunia kannada