ಮೈಸೂರು ದಸರಾ ಎಷ್ಟೊಂದು ಸುಂದರ; ಜಂಬೂ ಸವಾರಿಗೆ ತೆರೆ
ಮೈಸೂರು , ಗುರುವಾರ, 6 ಅಕ್ಟೋಬರ್ 2011 (20:37 IST)
ಸಾಂಸ್ಕೃತಿಕ ನಗರಿ ಮೈಸೂರಿನ ವಿಶ್ವವಿಖ್ಯಾತ ಜಂಬೂ ಸವಾರಿ ಅರಮನೆ ಆವರಣದಿಂದ ಹೊರಟ ಮೆರವಣಿಗೆ ಬನ್ನಿಮಂಟಪವನ್ನು ತಲುಪುವುದರೊಂದಿಗೆ ದಸರಾ ಜಂಬೂಸವಾರಿಗೆ ಗುರುವಾರ ತೆರೆಬಿದ್ದಿದೆ. ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿಗಜರಾಜ ಬಲರಾಮ 750 ಕೆಜಿ ತೂಕದ ರತ್ನಖಚಿತ ಚಿನ್ನದ ಅಂಬಾರಿಯನ್ನು ಹೊತ್ತು ಸುಮಾರು ಎಂಟು ಕಿಲೋ ಮೀಟರ್ ಅನ್ನು ಕ್ರಮಿಸಿ ಬನ್ನಿಮಂಟಪ ತಲುಪಿತ್ತು. ಈ ಸಂದರ್ಭದಲ್ಲಿ ಬಲರಾಮನಿಗೆ ಶ್ರೀರಾಮ, ಅರ್ಜುನ, ಅಭಿಮನ್ಯು, ಕೋಕಿಲಾ, ಮೇರಿ ಸೇರಿದಂತೆ 12 ಆನೆಗಳು ಸಾಥ್ ನೀಡಿದ್ದವು.ಸತತ 13ನೇ ಬಾರಿಗೆ ಚಿನ್ನದ ಅಂಬಾರಿಯಲ್ಲಿ ದೇವಿ ಚಾಮುಂಡಿಯನ್ನು ಹೊತ್ತ ಬಲರಾಮ ಘನ ಗಾಂಭೀರ್ಯದಿಂದ ಹೆಜ್ಜೆ ಹಾಕಿ ನಡೆಯುತ್ತಿದ್ದರೆ ದೇಶ-ವಿದೇಶಗಳಿಂದ ಆಗಮಿಸಿದ ಲಕ್ಷಾಂತರ ಮಂದಿ ವೈಭವವನ್ನು ವೀಕ್ಷಿಸಿ ಆನಂದಿಸಿದರು.ಜಂಬೂ ಸವಾರಿಯಲ್ಲಿ ಕುದುರೆಗಳು, ಪೊಲೀಸ್ ತುಕಡಿಗಳು, 34 ಸ್ತಬ್ಧಚಿತ್ರಗಳು, ನೂರಾರು ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಮೈಸೂರು ದಸರಾ ಎಷ್ಟೊಂದು ಸುಂದರ ಎಂಬಂತೆ ನಾಡಹಬ್ಬದ ಅಪೂರ್ವ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ದಸರೆಯಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದ್ದರು.ಮಧ್ಯಾಹ್ನ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಸಾಂಪ್ರದಾಯಿಕವಾಗಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಐತಿಹಾಸಿಕ ಜಂಬೂ ಸವಾರಿಗೆ ಚಾಲನೆ ನೀಡಿದರು.ಮೈನವಿರೇಳಿಸುವ ಬೈಕ್ ಕಸರತ್ತು;ಬನ್ನಿ ಮಂಟಪದ ಕವಾಯತು ಮೈದಾನದಲ್ಲಿ ಬೆಂಗಳೂರು ಮಿಲ್ಟ್ರಿ ಪೊಲೀಸರು ಪ್ರದರ್ಶಿಸಿದ ಮೈನವಿರೇಳಿಸುವ ಬೈಕ್ ಸ್ಟಂಟ್‌ಗಳು ಜನರನ್ನು ಮತ್ತಷ್ಟು ರಂಜಿಸಿದವು. ಅದೇ ರೀತಿ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ನಡೆದ ಜಟ್ಟಿ ಕಾಳಗವನ್ನೂ ಸಹಸ್ರಾರು ಸಂಖ್ಯೆಯಲ್ಲಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.