ಬನ್ನಿ, ನಾಡ ಹಬ್ಬದೊಳಗೆ ನೆಮ್ಮದಿಯನರಸೋಣ..
ನೆಮ್ಮದಿ ಬೇಕೆನ್ನಿಸಿದರೆ ನೀವು ಮೈಸೂರನ್ನು ಅರಸಲೇಬೇಕು. ಹಳೆಯ ಸೊಗಡಿನ ತಾಳಕ್ಕೆ ನೀವು ಮನಸೋಲಲೇ ಬೇಕು. ಪಾರಂಪರಿಕ ಸೌಧಗಳು, ಅರಮನೆಯ ವೈಭೋಗದ ಕುರುಹುಗಳು, ಭವ್ಯ ಪ್ರಾಕಾರ ಮಂದಿರ, ಮಂಟಪಗಳು, ಹಸಿರುಡುಗೆಯಲ್ಲಿ ಮಿಂದ ಉದ್ಯಾನಗಳು ಒಂದೇ ಎರಡೇ ಮನಗಳ ಸೂರೆಗೊಳ್ಳುವುದಕ್ಕೆ, ಮುದುಡಿದ ಮನಗಳಿಗೆ ಚೇತನ ಕೊಟ್ಟು ಒಂದು ಮಾಡುವುದಕ್ಕೆ!ಅರಮನೆಯ ಮುಂದಿನ ವಿಶಾಲ ರಹದಾರಿಯಲ್ಲಿ ಹಳೆಯ ಕುರುಹುಗಳಲ್ಲೊಂದಾದ ಟಾಂಗಾಗಳನ್ನೇರಿ ಸವಾರಿ ಹೊರಟರೆ ಆಹಾ ಏನು ಮಜಾ.. ಅನುಭವಿಸಿಯೇ ತೀರಬೇಕು. ಮೈಸೂರಲ್ಲಿ ವಿಶೇಷವಾದ ಮುಂಬಯಿಯ ವಿಕ್ಟೋರಿಯಾ ಟಾಂಗಾ ಹಾಗೂ ಮೈಸೂರು ಮಹಾರಾಜರ ಕಾಲದ ಷಾ ಪಸಂದ್ ಟಾಂಗಾಗಳಿವೆ. ಈಗಲೂ ಮೈಸೂರ ಮೂಲೆ ಮೂಲೆಗಳಲ್ಲಿ ತಡಕಾಡಿದರೆ ಅಲ್ಲೊಂದು ಇಲ್ಲೊಂದು ಟಾಂಗಾಗಳಲ್ಲಿ ಆ ದಿನಗಳನ್ನು ನೆನಪಿಗೆ ತರುವಂತಹ ಟಾಂಗಾಗಳಿದ್ದು ಅವುಗಳಲ್ಲಿ ದೀಪಗಳಿವೆ. ದಸರಾ ದಿನಗಳಲ್ಲಿ ಮೈಸೂರು ಸುತ್ತಲು ಟಾಂಗಾಗಳಿಗೆ ಎಲ್ಲಿಲ್ಲದ ಬೇಡಿಕೆ.
ದಸರೆಯ ಈ ದಿನಗಳಲ್ಲಿ ಮೈಸೂರಲ್ಲಿ ನೋಡಲೇನಿದೆ ಅಂತ ಹುಬ್ಬೇರಿಸಬೇಡಿ. ನೋಡುತ್ತಾ ಹೋದರೆ ದಿನಗಳೇ ಸಾಲದು. ಚಾಮುಂಡಿ ಬೆಟ್ಟದ ಬುಡದಲ್ಲಿನ ನಂದಿ, ಮೇಲಿರುವ ಮಹಿಷಾಸುರನಿಂದ ಹಿಡಿದು ಅರಮನೆ, ವಸ್ತು ಪ್ರದರ್ಶನ ಕ್ರೀಡಾಂಗಣ, ಲಲಿತಮಹಲ್ ಪ್ಯಾಲೇಸ್ ಹೀಗೆ ಹತ್ತು ಹಲವಾರು. ಬಾಂಬೆ ಟಿಫಾನಿಸ್, ಇಂದ್ರ ಭವನ್, ರಾಘವೇಂದ್ರ ಭವನ್, ಬಾಂಬೆ ಪರಾಸ್‌ನಂತಹ ಹಳೆಯ ಹೋಟೆಲ್‌ಗಳು ರಾಜರ ಕಾಲದಿಂದಲೂ ಇದ್ದು, ಇಂದಿಗೂ ತನ್ನ ರುಚಿಗೆ, ಅಚ್ಚುಕಟ್ಟುತನಕ್ಕೆ ಜನಪ್ರಿಯವಾಗಿದೆ. ಇನ್ನು ಮೇಯೋ ಹಾಲ್, ಕ್ಲಾಕ್ ಟವರ್, ಜಗನ್ಮೋಹನ ಪ್ಯಾಲೇಸ್, ಬಿಡಾರಂ ಕೃಷ್ಣಪ್ಪನವರ ರಾಮ ಮಂದಿರ, ವೀಣೆ ಶೇಷಣ್ಣನವರ ಗಾನಭಾರತೀ ಹೀಗೆ ಹತ್ತು ಹಲವಾರು ಹಳೆಯ ಕಟ್ಟಡಗಳು ಕಣ್ಮನ ಸೆಳೆಯುತ್ತವೆ.
ಮೈಸೂರು ಅರಮನೆಯನ್ನು ಇಂಡೋಸಾರ್ಸನಿಕ್ ಶೈಲಿಯಲ್ಲಿ 1897ರಲ್ಲಿ ನಿರ್ಮಿಸಲಾರಂಭಿಸಿ 1912ರಲ್ಲಿ ಪೂರ್ಣಗೊಳಿಸಲಾಯಿತು. ಅಂಬಾವಿಲಾಸ (ಖಾಸಗಿ ದರ್ಬಾರು ನಡೆಯುವ ಸ್ಥಳ), ದಸರಾ ಮೆರವಣಿಗೆಯ ಬೃಹತ್ ತೈಲವರ್ಣದ ಚಿತ್ರಣ, ಕಲ್ಯಾಣ ಮಂಟಪದ ಕೊಠಡಿಗಳನ್ನು ಅರಮನೆ ಒಳಗೊಂಡಿದೆ. ದಸರಾ ಅವಧಿಯಲ್ಲಿ ಮಾತ್ರ ಅರಮನೆಯಲ್ಲಿ ಚಿನ್ನದ ಸಿಂಹಾಸನ ನೋಡಲು ಅವಕಾಶವಿದೆ. ರಾತ್ರಿ ವೇಳೆ ಅರಮನೆಯು 96 ಸಾವಿರ ಬಲ್ಬುಗಳಿಂದ ಬೆಳಗುತ್ತದೆ. ಇನ್ನು ಚಾಮರಾಜೇಂದ್ರ ಮೃಗಾಲಯ 250 ಎಕೆರೆ ಸ್ಥಳಾವಕಾಶದಲ್ಲಿದೆ. ಇದನ್ನು ರಾಷ್ಟ್ರದ ಪ್ರಥಮ ಮೃಗಾಲಯವೆಂದೂ ಕರೆಯುತ್ತಾರೆ. ಜಗನ್ಮೋಹನ ಅರಮನೆ 1900ರಲ್ಲಿ ಕಟ್ಟಿದ್ದಾದರೂ ಇಂದಿಗೂ ಮನಮೋಹಕವಾಗಿದೆ. ಇದನ್ನು ನಾಲ್ಕನೇ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಕಲಾ ಸಂಗ್ರಹಾಲಯವಾಗಿ ಮಾರ್ಪಡಿಸಲಾಯಿತು. 1954ರಲ್ಲಿ ಅಧಿಕೃತವಾಗಿ ಮ್ಯೂಸಿಯಂ ಆಗಿ ಪರಿವರ್ತಿಸಲಾಯಿತು. ಇಲ್ಲಿ ರಾಜ ಮನೆತನದವರ ವರ್ಣಚಿತ್ರಗಳು, ರಾಜಾ ರವಿವರ್ಮ ಮತ್ತು ಭಾರತೀಯ ಮತ್ತು ಪಾಶ್ಚಾತ್ಯ ವರ್ಣಚಿತ್ರಗಳನ್ನು ನೋಡಬಹುದಾಗಿದೆ. ಚಾಮುಂಡಿ ಬೆಟ್ಟ ನೆಲ ಮಟ್ಟದಿಂದ 3,489 ಅಡಿ ಎತ್ತರದಲ್ಲಿದ್ದು 1000 ಮೆಟ್ಟಿಲುಗಳನ್ನು ಹೊಂದಿದೆ. ರಾಜ ಮನೆತನದವರ ಆರಾಧ್ಯದೇವಿಯಾದ ಚಾಮುಂಡೇಶ್ವರಿಯ ಬೃಹತ್ ದೇವಾಲಯವು ಬೆಟ್ಟದ ಮೇಲಿದ್ದು ದ್ರಾವಿಡ ಶೈಲಿಯಲ್ಲಿದೆ. ಕೆ.ಆರ್.ಎಸ್.ನ ಬೃಂದಾವನ ಮೈಸೂರಿನಿಂದ 15 ಕಿ.ಮಿ. ದೂರದಲ್ಲಿದೆ. ಕೃಷ್ಣ ರಾಜ ಸಾಗರ (ಕೆಆರ್ಎಸ್) ರೂವಾರಿ ಸರ್.ಎಂ. ವಿಶ್ವೇಶ್ವರಯ್ಯನವರ ಕೊಡುಗೆ ಈ ಪ್ರಾಂತ್ಯಕ್ಕೆ ಅತಿ ದೊಡ್ಡದು. ಈ ಅಣೆಕಟ್ಟೆ 2621 ಮೀಟರಿಷ್ಟು ಉದ್ದ ಮತ್ತು 39 ಮೀಟರಿಷ್ಟು ಎತ್ತರವಿದೆ. ಜಲಾಶಯವು ಸುಮಾರು 130 ಚದರ ಅಡಿ ಕಿ.ಮೀ.ನಷ್ಟು ಪ್ರದೇಶದಲ್ಲಿದೆ. ಜಲಾಶಯದ ಸುತ್ತಲಿರುವ ಉದ್ಯಾನವನ, ಪುಟಿದೇಳುವ ಸಂಗೀತ ಕಾರಂಜಿ, ದೀಪಾಲಂಕಾರದಿಂದ ಅತ್ಯಾಕರ್ಷಕವಾಗಿದೆ. ಮೈಸೂರು ಎಷ್ಟು ಸುಂದರವೋ ಅಷ್ಟೇ ಸುಂದರವಾದ ಸ್ಥಳಗಳು ಅದರ ಸುತ್ತಮುತ್ತಲಿವೆ. ಅವುಗಳಲ್ಲಿ ಪ್ರಮುಖವಾಗಿ ಶ್ರೀರಂಗಪಟ್ಟಣ, ರಂಗನತಿಟ್ಟು, ನಂಜನಗೂಡನ್ನು ಹೆಸರಿಸಬಹುದು.ಮೈಸೂರು ಮಲ್ಲಿಗೆ, ಅದರ ಗಂಧ ಎಲ್ಲೆಎಲ್ಲೆಗೆ ಮೈಸೂರು ಮಲ್ಲಿಗೆಯ ತವರೂರು. ಘಮ್ಮೆನುವ ಸೂಜಿ ಮಲ್ಲಿಗೆ, ಜಾಜಿ ಮಲ್ಲಿಗೆ, ದುಂಡು ಮಲ್ಲಿಗೆ ಎಲ್ಲೆ ಎಲ್ಲೆಗೆ ಹರಡಿ ಪರಿಮಳ ಬೀರುತ್ತವೆ. ಮೊಗ್ಗಿನ ಮಾಲೆಯ ಮುಡಿದು ದಸರೆಯ ಸವಾರಿ ನೋಡಲೆಂದು ಹೊರಡುವ ಹೆಂಗಳೆಯರು ಮೈಸೂರ ಚಂದಕ್ಕೊಂದು ಗರಿಮೆಯಾದರೆ ಮಲ್ಲಿಗೆಯ ರಾಶಿ ರಾಶಿಯನ್ನು ದಸರೆಯ ಸಂದರ್ಭದಲ್ಲಿ ಬೀದಿ ಬೀದಿಗಳಲ್ಲಿ ಕಾಣಬಹುದು.ಬಹುಶಃ ಮೈಸೂರ ಮಲ್ಲಿಗೆಯ ಪರಿಮಳಕ್ಕೆ ಸೋತೇ ಪ್ರೇಮ ಕವಿ ಕೆ.ಎಸ್. ನರಸಿಂಹ ಸ್ವಾಮಿ ತಮ್ಮ ಮೈಸೂರು ಮಲ್ಲಿಗೆ ಕವನ ಸಂಕಲನದಲ್ಲಿ "ಹೂವು ಬೇಕೇ ಎಂದು ಮುಂಬಾಗಿಲಿಗೆ ಬಂದು ಕೇಳಿದಳು, ನಗು ನಗುತ ಹೂವಿನವಳು. ಬುಟ್ಟಿಯಲಿ ನೂರಾರು ಮಲ್ಲಿಗೆ ದಂಡೆಗಳು ನಗುವ ಚೆಲ್ಲಿದುವೆನ್ನ ಮುಖವ ಕಂಡು" ಎಂದು ಬರೆದಿದ್ದಾರೆ. ಮೈಸೂರು ಪ್ರವಾಸಿಗರ ಸ್ವರ್ಗವಷ್ಟೇ ಅಲ್ಲ ಮಲ್ಲಿಗೆಯ ಸೋಪಾನ ಎಂಬುದು ಇಂದಿಗೂ ಮನೆ ಮಾತು.
ದಸರೆಯ ಮುಡಿಗೆ ಮಲ್ಲಿಗೆಯೇ ಬೇಕು. ದಸರೆಯ ದಿನಗಳಲ್ಲಿ ದೇಗುಲಗಳು ಮಲ್ಲಿಗೆಯ ಮಾಲೆಗಳಿಂದ, ಮಲ್ಲಿಗೆಯ ದಂಡೆಗಳಿಂದ ವಿಜೃಂಭಿಸುತ್ತವೆ. ಮಲ್ಲಿಗೆ ಇಂದಿಗೂ ಮೈಸೂರು ನಗರದ ಸುತ್ತ ಮುತ್ತ ಯಥೇಚ್ಛವಾಗಿ ಬೆಳೆಯುವ ಹೂವು. ಮುಂಚೆಲ್ಲಾ ಮೈಸೂರ ಅಂಗಣದ ತುಂಬೆಲ್ಲಾ ಮಲ್ಲಿಗೆಯ ತೋಟಗಳಿದ್ದವು, ಬೀರುವ ಕಂಪಿನಿಂದಾಗಿ ಮುದುಡಿದ ಮನಸ್ಸುಗಳನ್ನು ಒಂದು ಮಾಡುವ ಶಕ್ತಿ ಅದಕ್ಕಿತ್ತು ಆದರೆ ಐಟಿ - ಬಿಟಿಗಳ ಕಂಪು, ಪಾರ್ಥೇನಿಯಂಗಳ ಕಮರು ಹರಡುತ್ತಿದ್ದಂತೆ ಮೈಸೂರಿನಲ್ಲಿ ಇಂದು ಅಷ್ಟೇನೂ ಮಲ್ಲಿಗೆಯ ಭರಾಟೆಯಿಲ್ಲ. ಆದರೆ ಅದರ ಕಂಪು ಇನ್ನೂ ಮಾಸಿಲ್ಲ.ದಸರೆಯ ಈ ದಿನಗಳಲ್ಲಿ ಮಲ್ಲಿಗೆ ಅಲ್ಲಲ್ಲಿ ಕಂಡರೂ ನೈಜ ಮೈಸೂರು ದುಂಡು ಮಲ್ಲಿಗೆ ಕಾಣಸಿಗುವುದು ವಿರಳ. ಆದರೆ ಮಲ್ಲಿಗೆಯ ಬೀಡಾದ ಮೈಸೂರಲ್ಲೀಗ ತಮಿಳು ಮಲ್ಲಿಗೆಯ ಪರಿಮಳ. ಮೈಸೂರು ಮಲ್ಲಿಗೆ ಹೆಚ್ಚಾಗಿ ಕಾಣಸಿಗುವುದು ಎಚ್.ಡಿ.ಕೋಟೆ, ಹುಣಸೂರು, ನಂಜನಗೂಡಿನ ಆಸುಪಾಸಿನಲ್ಲಿ ಮಾತ್ರ.ಮೈಸೂರನ್ನು ದೇವಿಯ ತವರೂರೆಂದೇ ಕರೆಯುತ್ತಾರೆ. ದೇವಿಯನ್ನು ಸಂತೃಪ್ತಿಗೊಳಿಸಲು ಮಲ್ಲಿಗೆ ಹೂವಿನ ಪೂಜೆ ಮಾಡಬೇಕೆನ್ನುತ್ತದೆ ನಮ್ಮ ಪುರಾಣಗಳು. ಬಹುಶಃ ಅದಕ್ಕೇ ಇರಬೇಕು ಇಲ್ಲಿ ಇಷ್ಟೊಂದು ಮಲ್ಲಿಗೆ ಹೂವಿನ ರಾಶಿಗಳು, ಮಲ್ಲಿಗೆ ದಂಡೆಗಳು! ವಿಸ್ಮಯ ತರುವ ವಿಚಾರವೆಂದರೆ ಮೈಸೂರು ಒಂದರಲ್ಲೇ ಪ್ರತಿ ದಿನ ಸರಾಸರಿ ಎರಡು ಸಾವಿರ ಕೆ.ಜಿ. ಮಲ್ಲಿಗೆ ಹೂವು ಖರ್ಚಾಗುತ್ತದಂತೆ. ಸಾಧಾರಣವಾಗಿ ಮಲ್ಲಿಗೆಯ ಇಳುವರಿ ಇರುವುದೇ ಫೆಬ್ರವರಿಯಿಂದ ಅಕ್ಟೋಬರ್‌ವರೆಗೆ. ದಸರೆ ಬರುವುದೂ ಸಾಧಾರಣವಾಗಿ ಅಕ್ಟೋಬರ್ ತಿಂಗಳಲ್ಲೇ! ಹಾಗಾಗೇ ಮೈಸೂರು ದಸರೆಯಲ್ಲಿ ಮಲ್ಲಿಗೆಯದೇ ಸಡಗರ.ಮಲ್ಲಯುದ್ಧದ ಸೊಗಡುಳ್ಳ ದಸರೆ ಕ್ರೀಡಾಕೂಟ
ಮೈಸೂರ ದಸರೆಯೆಂದರೆ ಅದೊಂದು ಬಗೆಯ ರೋಮಾಂಚನ. ಮೈನವಿರೇಳುವ ದಸರೆಯ ಹತ್ತು ದಿನದ ಹಬ್ಬದ ಸಾಲಿನ ಹಿಂದೆ ಸಾಂಪ್ರದಾಯಿಕ ಆಚರಣೆಗಳ ಹೂರಣಗಳೇ ಇವೆ. ಅಂದಿನ ಆಳರಸರ ಸಾಂಪ್ರದಾಯಿಕತೆಯ ಹಳೆಯ ದಿನಗಳು ನಿಮ್ಮೆದುರು ತೆರೆದಿಡುತ್ತವೆ. ದಸರೆಯ ಉತ್ಸವದಲ್ಲಿ ಅರಮನೆ ದರ್ಬಾರು, ಚಾಮುಂಡೀ ಪೂಜೆಯೆಷ್ಟು ಪ್ರಾಮುಖ್ಯವೋ ಅಷ್ಟೇ ಪ್ರಾಮುಖ್ಯತೆ ಹಾಗೂ ವಿಶೇಷತೆಯನ್ನು ಹೊಂದಿರುವ ದಸರಾ ಕ್ರೀಡಾ ಕೂಟ, ಆಸಕ್ತರ ಪಾಲಿನ ಸ್ವರ್ಗವೇ ಆಗಿದೆ. ಮಹಾರಾಜರ ಪರಂಪರೆ ಕಳೆಗುಂದಿದಂತೆ ಇಂದಿನ ದಿನದ ದಸರೆ ಕೇವಲ ಸಾಂಕೇತಿಕ ಸಂಭ್ರಮಕ್ಕಷ್ಟೇ ಮೀಸಲಾಗಿದೆ. ಢೀ ಢೀ ಎನ್ನುತ್ತಾ, ಪಟ್ಟುಗಳನ್ನು ಹಾಕುತ್ತಾ ಒಬ್ಬರನ್ನೊಬ್ಬರು ಮೇಲಕ್ಕೆತ್ತಿ ಬೆನ್ನು ತಾಗಿಸುವ ಗುರಿಯಲ್ಲಿ ಶಕ್ತಿ ಪ್ರದರ್ಶನ ನೀಡುವ ಆ ಮಲ್ಲಯುದ್ಧದ ಕುಸ್ತಿಯ ಕ್ಷಣಗಳನ್ನು ಕಾಣಬೇಕೆಂದರೆ ಮೈಸೂರು ದಸರೆಗೆ ಬರಬೇಕು. ದಸರಾ ಕ್ರೀಡೆಯ ಆನಂದ ಕ್ಷಣಗಳು ಆರಂಭವಾಗುವುದೇ ಜಿಲ್ಲಾ ಮಟ್ಟದ ಕ್ರೀಢಾ ಸ್ಪರ್ಧೆಗಳಿಂದ. ಮಹಾರಾಜರ ಅಂದಿನ ದಿನಗಳಲ್ಲಿ ಯಾವ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ದೇಶ, ವಿದೇಶಗಳಿಂದ ಪೈಲ್ವಾನರು ಬರುತ್ತಿದ್ದರೋ, ಯಾವ ಗರಡಿ ಮನೆಗಳು ವಿಜೃಂಭಿಸುತ್ತಿದ್ದವೋ ಅವ್ಯಾವುವೂ ಇಂದಿಲ್ಲ. ಯುವಜನ ಕ್ರೀಡಾ ಇಲಾಖೆಯ ನೆರೆವಿಗೆ ಗರಬಡಿದಂತಿರುವ ಗರಡಿ ಮನೆಗಳಿಗೆ ಈ ದಿನಗಳಲ್ಲಿ ಕಾಯಕಲ್ಪ ಬರುತ್ತದೆ. ಇಲಾಖಾ ಆದೇಶದನುಸಾರ ಜಿಮ್ನ್ಯಾಸ್ಟಿಕ್ ಕೇಂದ್ರಗಳು, ಗರಡಿ ಮನೆಗಳು, ಬಾಡಿ ಬಿಲ್ಡಿಂಗ್ ಸಂಸ್ಥೆಗಳು ತಮ್ಮ ಪಟುಗಳನ್ನು ಸ್ಪರ್ಧೆಗಳಲ್ಲಿ ಭಾಗವಹಿಸಲು ಕಳುಹಿಸುತ್ತಾರೆ. ಕಳೆದ ಮೂರು ವರ್ಷಗಳಿಂದ ದಸರೆಗಾಗಿಯೇ ರೂಪಿತವಾದ ಅರ್ಧ ಮ್ಯಾರಥಾನ್ ಕ್ರೀಡಾ ಮನೋಭಾವವನ್ನು ಸ್ಥಳೀಯರಲ್ಲಿ ಹೆಚ್ಚಿಸಲು ಅಷ್ಟೇನು ಯಶಸ್ವಿಯಾಗದಿದ್ದರೂ ಸಹ ಹಳೆಯ ಪರಂಪರೆಗಳ ಉಳಿವಿಗಾಗಿ ಒಂದು ಹೆಜ್ಜೆಯನ್ನೇ ಇಟ್ಟಿದೆ.
ಮೈಸೂರು ದಸರೆಯ ಕ್ರೀಡಾಕೂಟದಲ್ಲಿ ಮೂಲಸೌಲಭ್ಯಗಳ ಕೊರತೆ ಕಂಡರೂ ಭಾಗವಹಿಸುವವರ ಆಸಕ್ತಿಗೇನೂ ಕಡಿಮೆ ಇಲ್ಲ. ನೂತನ ದಾಖಲೆಗಳ ಬರವಿದ್ದರೂ ಸಹ ಹೊಸ ಪ್ರತಿಭೆಗಳ ಹುಡುಕಾಟಕ್ಕೊಂದು ತಳಹದಿಯಾಗಿದೆ. ದಶಕದ ಹಿಂದೆಯೇ ಚಾಮುಂಡಿ ಕ್ರೀಡಾಂಗಣವನ್ನು ನಗರದ ಕ್ರೀಡಾ ಮುಕುಟ ಮಣಿಯಾಗಿ ತಲೆ ಎತ್ತಿ ನಿಲ್ಲುವಂತೆ ಅಭಿವೃದ್ದಿ ಪಡಿಸಲಾಗಿದೆ. ಆದರೆ ಇಂದಿನ ಹೊಸ ಕ್ರೀಡೆಗಳ ಆಕರ್ಷಣೆಗಳಿಂದ ಹಳೆಯ ಕ್ರೀಡೆಗಳ ಪ್ರಾಮುಖ್ಯತೆ ದಿನಗಳೆದಂತೆ ಕುಂದುತ್ತಿರುವುದು ಶೋಚನಿಯ ಸಂಗತಿಯಾಗಿದೆ. ಸದ್ಯಕ್ಕೆ ಮೈಸೂರು ದಸರಾ ಜಂಗೀ ಕುಸ್ತಿಗಷ್ಟೇ ಸೀಮಿತವಾಗಿದೆ. ಅದರ ವ್ಯಾಪ್ತಿ ಇಂದಿನ ದಿನಗಳಿಗನುಗುಣವಾಗಿ ಮತ್ತಷ್ಟು ಹೆಚ್ಚಬೇಕಿದೆ. ಈಜುಗೊಳದಂತಹ ಮುಂದಿನ ಯೋಜನೆಗಳು ಬರೀ ಕಾಗದದಲ್ಲೇ ಉಳಿದಿದ್ದು ಕಾರ್ಯ ರೂಪಕ್ಕೆ ಬರಬೇಕಾದ ಅವಶ್ಯಕತೆ ಹೆಚ್ಚಿದೆ. ದಸರಾ ಕ್ರೀಡಾಕೂಟವು ಗ್ರಾಮೀಣ ಪ್ರತಿಭಾನ್ವಿತರಿಗೆ ತೆರೆದ ಕನ್ನಡಿಯಾಗಬೇಕು ಎಂಬುದೇ ಕ್ರೀಡಾಸಕ್ತರ ಅಂಬೋಣ. ಸಾಂಕೇತಿಕ ನಡೆಯುವ ಕ್ರೀಡಾ ಉತ್ಸವ ಮಹತ್ತರವಾಗಿ ಹೊರಹೊಮ್ಮಬೇಕೆಂಬುದೇ ದಸರಾ ಪ್ರಿಯರ, ದಸರಾ ನೋಡುಗರ ಹೆಬ್ಬಯಕೆ.