ಜಂಬೂ ಸವಾರ ಿ
ವಿಜಯದಶಮಿಯಂದು ನಡೆಯುವ ಜಂಬೂ ಸವಾರಿ ಮಾತ್ರ ಅತ್ಯದ್ಬುತ. ಇಂತಹಾ ಒಂದು ಭವ್ಯ ಮೆರವಣಿಗೆಯನ್ನು ನಾವು ಬೇರೆಲ್ಲೂ ಕಾಣಲಾರೆವು. ಜಂಬೂ ಸವಾರಿಯ ಪ್ರಮುಖ ಆಕರ್ಷಣೆಯೇ ಚಿನ್ನದ ಅಂಬಾರಿ. ಮೊದಲು ಮಹಾರಾಜರು ಇದರಲ್ಲಿ ಕುಳಿತು ಮೆರವಣಿಗೆಯಲ್ಲಿ ಸಾಗುತ್ತಿದ್ದರೆ, ಈಗ ಚಾಮುಂಡೇಶ್ವರಿಯ ವಿಗ್ರಹವನ್ನಿಟ್ಟು ಮೆರವಣಿಗೆ ನಡೆಯುತ್ತದೆ. ಈ ಅಂಬಾರಿಯ ಬಗ್ಗೆ ಹೇಳಬೇಕೆಂದರೆ ಇದರ ತೂಕ ಸುಮಾರು 750 ಕೆ.ಜಿ. ಈ ಸುಂದರ ಮಂಟಪಕ್ಕೆ ಕರಕುಶಲ ಕಲೆಗಾರರು ಚಿನ್ನದ ತಗಡನ್ನು ಹೊದಿಸಿದ್ದು ಇದರ ನಿರ್ಮಾಣಕ್ಕೆ ಬಳಕೆಯಾಗಿರುವ ಚಿನ್ನ ಸುಮಾರು 80 ಕೆ.ಜಿ.ಯಂತೆ.
ಅಂಬಾರಿ ಮೇಲೆ 5 ಕಳಶಗಳಿದ್ದು, ಅಂಬಾರಿಯಲ್ಲಿ ಎಲೆ, ಹೂ, ಬಳ್ಳಿಗಳ ಚಿತ್ತಾರಗಳನ್ನು ಮೈಸೂರು ಶೈಲಿಯಲ್ಲಿ ಕೆತ್ತಲಾಗಿದೆ. ದಸರಾ ದಿನದಂದು ನಿಗದಿತ ಮುಹೂರ್ತದಲ್ಲಿ ವಿಧಿ ವಿಧಾನದಂತೆ ಅಂಬಾರಿಯನ್ನು ಬಲರಾಮನಿಗೆ ಹೊರಿಸಲಾಗುತ್ತದೆ. ಇದರೊಂದಿಗೆ ಸಿಂಗಾರಗೊಂಡ ಇತರ 12 ಆನೆಗಳು ಹೆಜ್ಜೆ ಹಾಕುತ್ತವೆ.
ಈ ಸಂದರ್ಭ ನಡೆಯುವ ಜಂಬೂ ಸವಾರಿಯಲ್ಲಿ ರಕ್ಷಣಾ ಪಡೆಗಳ ಕವಾಯತ್, ವಿವಿಧ ಜಾನಪದ ಕಲಾ ತಂಡಗಳು, ವಿವಿಧ ಇಲಾಖೆಗಳಲ್ಲದೆ, ವಿವಿಧ ಜಿಲ್ಲೆಯ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಮನಸೆಳೆಯುತ್ತವೆ.
ಅರಮನೆಯ ಆವರಣದಿಂದ ಆರಂಭವಾಗುವ ಜಂಬೂಸವಾರಿ ಸಯ್ಯಾಜಿರಾವ್ ರಸ್ತೆ ಮೂಲಕ ಸಾಗಿ ಬನ್ನಿ ಮಂಟಪದಲ್ಲಿ ಬನ್ನಿ ಕಡಿಯುವುದರೊಂದಿಗೆ ಅಂತ್ಯಗೊಳ್ಳುತ್ತದೆ. ಬಳಿಕ ಬನ್ನಿಮಂಟಪದ ಮೈದಾನದಲ್ಲಿ ಅಂದು ರಾತ್ರಿ ನಡೆಯುವ ಪಂಜಿನ ಮೆರವಣಿಗೆ, ಬೈಕ್ ರೇಸ್, ಬಾಣಬಿರುಸು ಪ್ರದರ್ಶನದೊಂದಿಗೆ ದಸರಾಕ್ಕೆ ವಿದಾಯ ಹೇಳಲಾಗುತ್ತದೆ.
ಅಂದಿಗೆ ದಸರಾದ ಆಚರಣೆಗಳು ಮುಗಿದು ಹೋಗಬಹುದು. ಆದರೆ ದಸರಾ ಸಂಭ್ರಮ ಮಾತ್ರ ಹಲವು ದಿನಗಳವರೆಗೆ ಮೈಸೂರಿನಲ್ಲಿ ಹಾಗೆಯೇ ಉಳಿಯುತ್ತದೆ. ದಸರಾದ ಸುಂದರ ಕ್ಷಣಗಳನ್ನು ಹತ್ತಿರದಿಂದ ಸವಿದ ಪ್ರೇಕ್ಷಕ ಅದೇ ಗುಂಗಿನಲ್ಲಿ ಮುಂದಿನ ದಸರಾಕ್ಕೆ ಕಾಯುತ್ತಾನೆ...