Select Your Language

Notifications

webdunia
webdunia
webdunia
webdunia

ಮಕ್ಕಳಾಟ ಕಾಂಗ್ರೆಸ್‌ನಲ್ಲಾಡಿ ಮಂಡ್ಯದಲ್ಲಲ್ಲ: ರಮ್ಯಾಗೆ ಸಂಸದರ ಎಚ್ಚರಿಕೆ

ಮಕ್ಕಳಾಟ ಕಾಂಗ್ರೆಸ್‌ನಲ್ಲಾಡಿ ಮಂಡ್ಯದಲ್ಲಲ್ಲ: ರಮ್ಯಾಗೆ ಸಂಸದರ ಎಚ್ಚರಿಕೆ
ಮಂಡ್ಯ , ಶನಿವಾರ, 10 ಅಕ್ಟೋಬರ್ 2015 (18:39 IST)
ವರಿಷ್ಠರು ಸೂಚಿಸಿದರೂ ಕೂಡ ಮೃತ ರೈತನ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಅವರು ತೆರಳಲಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯದ ಹಾಲಿ ಸಂಸದ ಸಿ.ಎಸ್.ಪುಟ್ಟರಾಜು ಅವರು ಮಾಜಿ ಸಂಸದೆ ರಮ್ಯಾ ಅವರ ವಿರುದ್ಧ ಗುಡುಗಿದ್ದು, ಮಕ್ಕಳ ಆಟ ಆಡುವುದನ್ನು ರಮ್ಯಾ ಬಿಡಲಿ ಎಂದು ಹೇಳುವ ಮೂಲಕ ಗರಂ ಆಗಿದ್ದಾರೆ. 
 
ನಗರದಲ್ಲಿಂದು ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ಜಿಲ್ಲೆಯ ಹೆಚ್ಚು ಮಂದಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು ಜಿಲ್ಲೆ ಪ್ರಸ್ತುತ ಸೂತಕದ ಮನೆಯಾಗಿದೆ. ಹೀಗಿರುವಾಗ ಮಾಜಿ ಸಂಸದೆ ರಮ್ಯಾ ಅವರು ಮಕ್ಕಳಾಟ ಆಡಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಆದರೆ ಸೂತಕದ ಮನೆಯಲ್ಲಿ ಇಂತಹ ರಾಜಕೀಯ ಬೇಡ ಎಂದ ಅವರು, ಫಿಟಿಂಗ್ ಇಡುವುದನ್ನು ಬಿಟ್ಟು ಹಿರಿಯ ನಾಯಕರಿಂದ ಮಾರ್ಗದರ್ಶನ ಪಡೆದು ರಾಜಕೀಯ ಮಾಡಲಿ. ಅದನ್ನು ಬಿಟ್ಟು ಮಕ್ಕಳಾಟ ಆಡುತ್ತಿದ್ದಾರೆ. ಅವರ ಮಕ್ಕಳಾಟ ಕಾಂಗ್ರೆಸ್ ಪಕ್ಷದಲ್ಲಾಡಲಿ, ಮಂಡ್ಯದಲ್ಲಲ್ಲ ಎಂದು ಕಿಡಿಕಾರಿದರು.  
 
ಇದೇ ವೇಳೆ, ಸಣಬದಕೊಪ್ಪಲಿನ ಮೃತ ರೈತ ಲೋಕೇಶ್ ಅವರ ಪತ್ನಿ ಶೋಭಾ ಅವರಿಗೆ ಚೆಕ್ ವಿತರಿಸಲಾಗಿತ್ತು. ಆದರೆ ನಾಯಕರು ಮಾತನಾಡುತ್ತಿದ್ದ ವೇಳೆ ಶೋಭಾ ಅವರು ಚೆಕ್‌ನ್ನು ಕೆಳಗೆ ಬೀಳಿಸಿದ್ದರು. ಬಳಿಕ ಅಂಬರೀಶ್ ಅವರು ಅದೇ ಚೆಕ್‌ನ್ನು ತೆಗೆದುಕೊಂಡು ನನಗೆ ಕೊಟ್ಟರು. ಆದರೆ ಅದನ್ನು ನೀವೇ ನೀಡಿ ಎಂದಾಗಲಿ, ಅಥವಾ ಎರಡು ಚೆಕ್ಕಿನಲ್ಲಿ ಒಂದನ್ನು ನನಗಾಗಲಿ ನೀಡಲಿಲ್ಲ. ಅದು ಲೋಕೇಶ್ ಕುಟುಂಬಕ್ಕೆ ನೀಡಬೇಕಿದ್ದ ಚೆಕ್ ಆಗಿತ್ತೇ ಹೊರತು ಕೊತ್ತತ್ತಿ ಗ್ರಾಮದ ಮಹಾದೇವ್ ಅವರಿಗೆ ಸೇರಿದ್ದ ಚೆಕ್ ಅಲ್ಲ ಎಂದು ಸ್ಪಷ್ಟಪಡಿಸಿದರು. 
 
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಪ್ರತಿಕ್ರಿಯಿಸಿದ್ದ ಸಚಿವ ಅಂಬರೀಶ್, ಮೃತ ರೈತರಿಗೆ ಪರಿಹಾರ ನೀಡಿ. ಇಲ್ಲವಾದಲ್ಲಿ ನಾವು ಪ್ರತಿಭಟನೆಗೆ ಇಳಿಯುತ್ತೇವೆ ಎಂದಿದ್ದರು. ಈ ನಡುವೆ ಸರ್ಕಾರ ಪರಿಹಾರ ನೀಡಲು ಮುಂದಾಗಿತ್ತು. ಆದರೆ ಮೃತರ ಪತ್ನಿ ಹೆಸರನಲ್ಲಿ ಚೆಕ್ ನೀಡಲಾಗಿತ್ತು. ಆದರೆ ಖಾತೆ ತೆರೆಯದ ಹಿನ್ನೆಲೆಯಲ್ಲಿ ನಗದು ಙಣ ನೀಡುವಂತೆ ಮೃತ ರೈತನ ಪತ್ನಿ ಕೇಳಿಕೊಂಡಿದ್ದರು. ಹೀಗಾಗಿ ಚೆಕ್ ನಲ್ಲಿ ಯಾವುದಾದರೂ ಸಮಸ್ಯೆ ಇದೆಯೇ ಎಂದು ಪುಟ್ಟರಾಜು ಅವರಿಗೆ ತೋರಿಸಿದ್ದೆ ಅಷ್ಟೇ ಎಂದಿದ್ದರು.  
 
ಈ ಪ್ರಕರಣದ ಕೇಂದ್ರ ಬಿಂದು ಮಾಜಿ ಸಂಸದೆ ರಮ್ಯಾ ಅವರೇ ಆಗಿದ್ದು, ಚೆಕ್ ವಿತರಣೆ ಜವಾಬ್ದಾರಿಯನ್ನು ನೀವು ಅಂಬರೀಶ್ ಅವರಿಗೆ ವಹಿಸಿದ್ದಿರಿ. ಆದರೆ ಮೃತ ರೈತನ ಮನೆಗೆ ತೆರಳದ ಅಂಬರೀಶ್ ಅವರು ಅದೇ ಚೆಕ್‌ನ್ನು ಜೆಡಿಎಸ್ ಸಂಸದ ಪುಟ್ಟರಾಜು ಅವರಿಗೆ ನೀಡಿದ್ದಾರೆ. ಆ ಮೂಲಕ ಮೃತ ರೈತನ ಮನೆಗೆ ತೆರಳುವಲ್ಲಿ ತಪ್ಪಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸಚಿವ ಅಂಬರೀಶ್ ಅವರನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರು ತೀವ್ರ ತರಾಟೆ ತೆಗೆದುಕೊಂಡಿದ್ದರು. ಹೀಗಾಗಿ ಚೆಕ್ ವಿವಾದ ಹುಟ್ಟಿಕೊಂಡಿತ್ತು. ಇದರಿಂದ ಸಂಸದ ಪುಟ್ಟರಾಜು ಅವರು ಮಾಜಿ ಸಂಸದೆ, ನಟಿ ರಮ್ಯಾ ವಿರುದ್ಧ ಗರಂ ಆಗಿದ್ದಾರೆ.   

Share this Story:

Follow Webdunia kannada