ನವದೆಹಲಿ: ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಾಕ್ಸಿನ್ ಲಸಿಕೆಗೆ ಡಬ್ಲ್ಯೂಎಚ್ಒ ಅನುಮತಿ ಸಿಗುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಪೂರಕವೆಂಬಂತೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಅವರು ಕೋವ್ಯಾಕ್ಸಿನ್ನ ಮೂರನೇ ಹಂತರ ಪ್ರಯೋಗ ಫಲಿತಾಂಶದ ವಿವರಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ಧಾರೆ. ನ್ಯೂಸ್18 ಸೋದರ ಸಂಸ್ಥೆ ಸಿಎನ್ಬಿಸಿ-ಟಿವಿ18 ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಡಾ. ಸೌಮ್ಯಾ, ಕೋವ್ಯಾಕ್ಸಿನ್ನ ಮೂರನೇ ಹಂತದ ಟ್ರಯಲ್ ಡಾಟಾವನ್ನು ಗಮನಿಸಿದರೆ ಸರಿ ಇದ್ದಂತಿದೆ.
ಕೊರೋನಾ ರೂಪಾಂತರಿ ವೈರಸ್ಗಳನ್ನೂ ಗಮನದಲ್ಲಿಟ್ಟುಕೊಂಡು ಪ್ರಯೋಗ ಮಾಡಿದಂತಿದೆ ಎಂದು ಅವರು ಹೇಳಿದ್ದಾರೆ. “ಈ ಲಸಿಕೆಯ ಒಟ್ಟಾರೆ ಕ್ಷಮತೆ ಹೆಚ್ಚಿದೆ. ಡೆಲ್ಟಾ ರೂಪಾಂತರಿ ಎದುರು ಇದರ ಕ್ಷಮತೆ ತುಸು ಕಡಿಮೆ ಇದ್ದರೂ ಪರಿಣಾಮಕಾರಿಯಂತೂ ಇದೆ… ಇದರ ಸುರಕ್ಷತೆಯು ಡಬ್ಲ್ಯೂಎಚ್ಒ ನಿಗದಿಪಡಿಸಿದ ಗುಣಮಟ್ಟಕ್ಕೆ ತಾಳೆಯಾಗುತ್ತದೆ” ಎಂದು ಚೀಫ್ ಸೈಂಟಿಸ್ಟ್ ಸ್ಪಷ್ಟಪಡಿಸಿದ್ದಾರೆ.