ಚೆನ್ನೈ: ಟೀಂ ಇಂಡಿಯಾ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ಗೆ 2016 ಕನಸಿನ ವರ್ಷ. ಅಷ್ಟು ಅದ್ಭುತವಾಗಿ ಅವರು ಈ ವರ್ಷ ಮುಗಿಸಿದ್ದಾರೆ. ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿಯೂ ಅವರದಾಗಿದೆ. ಆದರೆ ಇದಕ್ಕಿಂತ ದೊಡ್ಡ ಖುಷಿ ಅವರ ಜೀವನದಲ್ಲಿ ನಡೆದಿದ್ದರೂ ಯಾರಿಗೂ ಗೊತ್ತೇ ಇರಲಿಲ್ಲ! ಅದೇನದು ತಿಳಿಯಬೇಕಾ?
ಡಿಸೆಂಬರ್ 20 ರಂದು ಭಾರತ ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ ಅಂತಿಮ ಟೆಸ್ಟ್ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡಿತ್ತು. ಆ ಸರಣಿಯಲ್ಲಿ ಅಶ್ವಿನ್ ಪ್ರದರ್ಶನ ಸರ್ವ ಶ್ರೇಷ್ಠವಾಗಿತ್ತು. ಎಲ್ಲರೂ ಈಗ ಅಶ್ವಿನ್ ಗುಣಗಾನ ಮಾಡುವವರೇ.
ಆದರೆ ಆ ಟೆಸ್ಟ್ ಮುಗಿದ ಮರುದಿನ ಅಂದರೆ ಡಿಸೆಂಬರ್ 21 ರಂದು ಅಶ್ವಿನ್ ಎರಡನೇ ಬಾರಿಗೆ ಹೆಣ್ಣು ಮಗುವಿನ ತಂದೆಯಾಗಿದ್ದರು. ಅವರ ಪತ್ನಿ ಪ್ರೀತಿ ಹೆಣ್ಣು ಮಗುವಿಗೆ ಜನ್ಮವಿತ್ತ ಸುದ್ದಿ ಎಲ್ಲೂ ಬಹಿರಂಗವಾಗಲೇ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅಶ್ವಿನ್ ಹಾಗೂ ಟ್ವಿಟರ್ ನಲ್ಲಿ ಸಕ್ರಿಯರಾಗಿರುವ ಅವರ ಪತ್ನಿ ಪ್ರೀತಿ ಕೂಡಾ ಈ ವಿಷಯವನ್ನು ಬಹಿರಂಗಪಡಿಸಿರಲಿಲ್ಲ. ಕಾರಣ, ಅವರಿಗೆ ಪತಿ ಅಶ್ವಿನ್ ರ ಅದ್ಭುತ ಪ್ರದರ್ಶನದಿಂದ ಜನರ ಗಮನವನ್ನು ಬೇರೆ ಕಡೆಗೆ ಸೆಳೆಯಲು ಇಷ್ಟವಿರಲಿಲ್ಲವಂತೆ!
ಹೀಗೂ ಉಂಟೇ ಎನಿಸಿದರೂ ಇದು ಸತ್ಯ. ಇದೀಗ ಪ್ರೀತಿ ಈ ವಿಷಯವನ್ನು ತಮ್ಮ ಟ್ವಿಟರ್ ಪೇಜ್ ನಲ್ಲಿ ಬಹಿರಂಗಪಡಿಸಿದ್ದಾರೆ. ಈ ನಡುವೆ ಅಶ್ವಿನ್ ಧೋನಿ ಸಂಬಂಧದ ಬಗ್ಗೆಯೂ ಸಾಕಷ್ಟು ಚರ್ಚೆಗಳಾಗುತ್ತಿತ್ತು. ಆದರೆ ಅವರ ಮುದ್ದಿನ ಮಗಳು ಮಾತ್ರ ತಾನು ಜಗತ್ತಿಗೆ ಬಂದಿರುವ ವಿಷಯವನ್ನು ತಿಳಿಸಲು ಐದು ದಿನ ಕಾದಿದೆ.
ಈ ವಿಷಯವನ್ನು ಪ್ರೀತಿ ಅಷ್ಟೇ ವಿಶಿಷ್ಟವಾಗಿ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ. “ನಾನು ಕ್ಯಾರಮ್ ಬೇಬಿ 2 ಗೆ ಜನ್ಮವತ್ತಿದ್ದೇನೆ. ಅವಳು ರಾಜ್ಯದಲ್ಲಿ ಸಂಭವಿಸಿದ ಸೈಕ್ಲೋನ್ ಮುಗಿಯುವವರೆಗೆ, ಚೆನ್ನೈ ಟೆಸ್ಟ್ ಮುಕ್ತಾಯಗೊಳ್ಳುವವರೆಗೆ ಕಾದು ನಂತರ ಹೊರ ಜಗತ್ತಿಗೆ ಬಂದಳು” ಎಂದು ಪ್ರೀತಿ ಹೇಳಿಕೊಂಡಿದ್ದಾರೆ.
ಧೋನಿ ವಿಚಾರದಲ್ಲಿ ವೈಮನಸ್ಯದ ವರದಿಗಳು ಬಂದಾಗ ಟ್ವೀಟ್ ಮಾಡಿದ್ದ ಅಶ್ವಿನ್ ತಮ್ಮ ಪತ್ನಿಯನ್ನು ಈ ವಿಚಾರದಲ್ಲಿ ಟ್ಯಾಗ್ ಮಾಡಬೇಡಿ. ಆಕೆಗೆ ಈಗ ಸಾಕಷ್ಟು ಕೆಲಸಗಳಿವೆ ಎಂದು ಪರೋಕ್ಷವಾಗಿ ಖುಷಿಯ ವಿಚಾರವನ್ನು ಬಹಿರಂಗಪಡಿಸಿದ್ದರು. ಅಂತೂ ತಮ್ಮ ಸೀಕ್ರೆಟ್ ಬೌಲಿಂಗ್ ಅಸ್ತ್ರದಂತೆ ಈ ವಿಚಾರವನ್ನೂ ಗುಟ್ಟಾಗಿ ಇಟ್ಟಿದ್ದರು ಗಂಡ-ಹೆಂಡತಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ