ನಿಯತಕಾಲಿಕೆಯೊಂದರ ಮುಖಪುಟದಲ್ಲಿ ಭಗವಾನ್ ವಿಷ್ಣುವಿನ ಅವತಾರದೊಂದಿಗೆ ಕಾಣಿಸಿಕೊಂಡು ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಿದ್ದ ಆರೋಪವನ್ನೆದುರಿಸುತ್ತಿದ್ದ ಕೂಲ್ ಕ್ಯಾಪ್ಟನ್ ಧೋನಿ ಈಗ ನಿರಾಳರಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮೇಲೆ ದಾಖಲಾಗಿದ್ದ ಎಲ್ಲ ದೂರುಗಳನ್ನು ಸೋಮವಾರ ಸುಪ್ರೀಕೋರ್ಟ್ ವಜಾಗೊಳಿಸಿದೆ.
2013ರಲ್ಲಿ ಪತ್ರಿಕೆಯೊಂದರ ಮುಖಪುಟದಲ್ಲಿ ಕೈಯ್ಯಲ್ಲಿ ಶೂ ಸೇರಿದಂತೆ ಅನೇಕ ವಸ್ತುಗಳನ್ನು ಹಿಡಿದುಕೊಂಡು ದೇವರ ಅವತಾರದಲ್ಲಿ ಧೋನಿ ಕಾಣಿಸಿಕೊಂಡಿದ್ದರು. ಇದು ಭಾರಿ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಕರ್ನಾಟಕದ ಸಾಮಾಜಿಕ ಕಾರ್ಯಕರ್ತ ಜಯಕುಮಾರ್ ಹೀರೆಮಠ್ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆಂದು ಆರೋಪಿಸಿ ಧೋನಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ದೇಶದ ಅನೇಕ ಕಡೆಗಳಲ್ಲಿ ಸಹ ಧೋನಿ ವಿರುದ್ಧ ಕೇಸ್ ದಾಖಲಾಗಿತ್ತು.
ಆಂಧ್ರಪ್ರದೇಶದ ಅನಂತಪುರದ ಕೋರ್ಟ್ ಧೋನಿ ವಿರುದ್ಧ ಜಾಮೀನುರಹಿತ ವಾರಂಟ್ ಜಾರಿ ಮಾಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಲ್ಲ ಕ್ರಿಮಿನಲ್ ಮೊಕದ್ದಮೆಗಳನ್ನು ವಜಾ ಮಾಡುವಂತೆ ಧೋನಿ ಸುಪ್ರೀಂ ಮೆಟ್ಟಿಲೇರಿದ್ದರು.
ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ರಂಜನ್ ಗೋಗೊಯಿ ನೇತೃತ್ವದ ಪೀಠ ಧೋನಿ ವಿರುದ್ಧದ ಎಲ್ಲ ದೂರುಗಳನ್ನು ರದ್ದುಗೊಳಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .