ಮುಂಬೈ: ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಹಾಕಿದವರಲ್ಲಿ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೂಡಾ ಒಬ್ಬರು. ಹೊಡೆಬಡಿಯ ಆಟಕ್ಕೆ ಹೆಸರಾದ ಸೆಹ್ವಾಗ್ ತಮ್ಮ ಅರ್ಜಿಯನ್ನೂ ಅಷ್ಟೇ ಚುಟುಕಾಗಿ ಮುಗಿಸಿದ್ದಾರೆ.
ಬಂದ ಬಾಲ್ ಗೆಲ್ಲಾ ಬೌಂಡರಿ, ಸಿಕ್ಸರ್ ಹೊಡೀಬೇಕು, ಬೇಗ ರನ್ ಗಳಿಸಿ ಬೇಗ ಇನಿಂಗ್ಸ್ ಮುಗಿಸಬೇಕು ಎಂಬ ಮನೋಭಾವದ ವೀರೂ ತಮ್ಮ ರೆಸ್ಯೂಮ್ ನ್ನು ಕೂಡಾ ಅಷ್ಟೇ ಇಂಟರೆಸ್ಟಿಂಗ್ ಆಗಿ ಮುಗಿಸಿದ್ದಾರೆ. ಅಷ್ಟಕ್ಕೂ ಅದರಲ್ಲಿ ಏನಿತ್ತು ಗೊತ್ತಾ?
‘ಐಪಿಎಲ್ ನ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್ ಅನುಭವವಿದೆ ಮತ್ತು ಟೀಂ ಇಂಡಿಯಾದಲ್ಲಿ ಈಗ ಆಡುವ ಎಲ್ಲಾ ಆಟಗಾರರ ಜತೆ ಆಡಿದ್ದಾನೆ’ ಎಂದು ಸೆಹ್ವಾಗ್ ತಮ್ಮ ಅರ್ಜಿಯಲ್ಲಿ ವಿವರಣೆ ಬರೆದು ಮುಗಿಸಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಲಂಡನ್ ನಲ್ಲಿ ಕಮೆಂಟೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸೆಹ್ವಾಗ್ ಇದೀಗ ಭಾರತಕ್ಕೆ ಮರಳಿದ್ದಾರೆ. ಇದೀಗ ಸೆಹ್ವಾಗ್ ರ ಎರಡು ವಾಕ್ಯದ ಒಕ್ಕಣೆ ನೋಡಿ ಬಿಸಿಸಿಐ ಸುದೀರ್ಘವಾದ ರೆಸ್ಯೂಮ್ ಕಳುಹಿಸಲು ಸೂಚಿಸಿದೆಯಂತೆ.
ಇದೀಗ ಲಂಡನ್ ನಲ್ಲಿರುವ ಬಿಸಿಸಿಐಯ ಸಲಹಾ ಸಮಿತಿ ಸದಸ್ಯರಾದ ಸೌರವ್ ಗಂಗೂಲಿ, ಸಚಿನ್ ತೆಂಡುಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ್ ಅಲ್ಲಿಂದಲೇ ನೇರವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋಚ್ ಗೆ ಅಭ್ಯರ್ಥಿಗಳ ಸಂದರ್ಶನ ನಡೆಸಲಿದ್ದಾರೆ.