ಚೆನ್ನೈ: ವರ್ಷದ ಕ್ರಿಕೆಟಿಗ ಪ್ರಶಸ್ತಿ ಪಡೆದ ನಂತರ ರವಿಚಂದ್ರನ್ ಅಶ್ವಿನ್ ದಿನಕ್ಕೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ನಿನ್ನೆಯಷ್ಟೇ ಎರಡನೇ ಮಗುವಿಗೆ ತಂದೆಯಾದ ಸುದ್ದಿಕೊಟ್ಟಿದ್ದ ಅಶ್ವಿನ್ ಇಂದು ಸಿನಿಮಾವೊಂದರಲ್ಲಿ ನಟಿಸಬೇಕಿತ್ತು ಎಂದು ಹೇಳಿ ಸುದ್ದಿಯಾಗಿದ್ದಾರೆ.
ಚೆನ್ನೈ 28 ಎನ್ನುವ ತಮಿಳು ಸಿನಿಮಾ ಎರಡು ವರ್ಷ ಹಿಂದೆ ಮೂಡಿ ಬಂದಿತ್ತು. ಇದು ಗಲ್ಲಿ ಕ್ರಿಕೆಟ್ ಕುರಿತಾದ ಸಿನಿಮಾ. ಅದೇ ಸಿನಿಮಾದ ಎರಡನೇ ಭಾಗ, ಈಗ ತಯಾರಾಗಿದೆ. ಅದರಲ್ಲಿ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲು ನಿರ್ದೇಶಕ ವೆಂಕಟ್ ಪ್ರಭು ಕೇಳಿಕೊಂಡಿದ್ದರಂತೆ.
ಆದರೆ ಕ್ರಿಕೆಟ್ ನಲ್ಲಿ ಬ್ಯುಸಿಯಾಗಿದ್ದ ಕಾರಣಕ್ಕೆ ಅವರಿಗೆ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಇದೀಗ ಆ ಚಿತ್ರವನ್ನು ನೋಡಿ ಟ್ವಿಟರ್ ನಲ್ಲಿ ಕಾಮೆಂಟ್ ಮಾಡಿರುವ ಅಶ್ವಿನ್ “ಚೆನ್ನೈ 28 (2) ಅದ್ಭುತ ಸಿನಿಮಾ. ಅದರಲ್ಲಿ ನಾನು ಪಾತ್ರ ಮಾಡಬೇಕಿತ್ತು ಎಂದು ಈಗ ಅನಿಸುತ್ತದೆ” ಎಂದು ಹೇಳಿಕೊಂಡಿದ್ದಾರೆ. ಇದೀಗ ಚಿತ್ರದ ಮೂರನೇ ಭಾಗವನ್ನು ತಯಾರು ಮಾಡಲು ಉದ್ದೇಶಿಸಿರುವ ನಿರ್ದೇಶಕರಿಗೆ ಮೂರನೇ ಭಾಗದಲ್ಲಾದರೂ ಅಶ್ವಿನ್ ರಿಂದ ಪಾತ್ರ ಮಾಡಿಸುವ ಯೋಜನೆಯಿದೆಯಂತೆ. ಎಲ್ಲಾ ಸರಿ ಹೋದರೆ, ಅಶ್ವಿನ್ ಸದ್ಯದಲ್ಲೇ ಬಣ್ಣ ಹಚ್ಚಿಯಾರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ