ನವದೆಹಲಿ: ಗೃಹ ಹಿಂಸೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಮೇಲೆ ಜಾರಿಯಾದ ಬಂಧನ ವಾರೆಂಟ್ ಗೆ ಜಿಲ್ಲಾ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಪತ್ನಿ ಹಸೀನ್ ಜಹಾನ್ ಗೆ ಗೃಹಹಿಂಸೆ ನೀಡಿದ ಆರೋಪದಲ್ಲಿ ಶಮಿ ಮೇಲೆ ಕೋಲ್ಕೊತ್ತಾದ ಎಸಿಜೆಎಂ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿ 15 ದಿನಗಳೊಳಗಾಗಿ ಮುಂದೆ ಹಾಜರಾಗಲು ಸೂಚಿಸಿತ್ತು. ಆದರೆ ಶಮಿ ಕ್ರಿಕೆಟ್ ಸರಣಿಗಾಗಿ ವಿಂಡೀಸ್ ಗೆ ತೆರಳಿದ್ದು, ಇನ್ನೂ ಭಾರತಕ್ಕೆ ಮರಳಬೇಕಿದೆಯಷ್ಟೇ.
ಈ ನಡುವೆ ಅವರ ಪರ ವಕೀಲರು ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದು, ಬಂಧನ ವಾರೆಂಟ್ ಗೆ ತಡೆಯಾಜ್ಞೆ ಬಂದಿದೆ. ಎಸಿಜೆಎಂ ನ್ಯಾಯಾಲಯ ಸಮನ್ಸ್ ನೀಡುವ ಬದಲು ನೇರವಾಗಿ ಅರೆಸ್ಟ್ ವಾರೆಂಟ್ ಹೊರಡಿಸಿದೆ ಎಂದು ಜಿಲ್ಲಾ ನ್ಯಾಯಾಲಯ ಲೋಪ ಎತ್ತಿ ಹಿಡಿದಿದೆ. ಹೀಗಾಗಿ ಸದ್ಯಕ್ಕೆ ಶಮಿ ನಿಟ್ಟುಸಿರು ಬಿಡುವಂತಾಗಿದೆ.