ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿಯಿರುವಂತೆಯೇ ಪಾಕಿಸ್ತಾನ ಸೋತು ಹೋಗಿದೆ. ಈ ಸೋಲಿನ ಬೇಸರದಲ್ಲಿರುವ ಪಾಕ್ ನಾಯಕ ಮಿಸ್ಬಾ ಉಲ್ ಹಕ್ ನಿವೃತ್ತಿಯ ಬಗ್ಗೆ ಯೋಚಿಸುತ್ತಿದ್ದಾರಂತೆ!
42 ವರ್ಷದ ಮಿಸ್ಬಾ ಸದ್ಯಕ್ಕೆ ಅಂತಾರಾಷ್ಟ್ರೀಯ ಪಂದ್ಯ ಆಡುತ್ತಿರುವವರಲ್ಲೇ ಅತ್ಯಂತ ಹಿರಿಯ. ಆದರೆ ಮಿಸ್ಬಾಗೆ ಪಾಕ್ ಎರಡನೇ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ಪರಿ ಭಾರೀ ಬೇಸರ ಉಂಟುಮಾಡಿದೆ. ಅದಕ್ಕಿಂತ ಹೆಚ್ಚಾಗಿ, ತಾನು ವೈಯಕ್ತಿಕವಾಗಿ ಎರಡೂ ಇನಿಂಗ್ಸ್ ಗಳಿಂದ ಕೇವಲ 11 ರನ್ ಗಳಿಸಲು ಶಕ್ತವಾಗಿರುವುದು ಅವರಿಗೆ ಇನ್ನಷ್ಟು ನೋವು ತಂದಿದೆಯಂತೆ.
ವೈಯಕ್ತಿಕವಾಗಿ ತನಗೆ ತಂಡಕ್ಕೆ ಏನೂ ಕೊಡುಗೆ ನೀಡಲು ಸಾಧ್ಯವಾಗುತ್ತಿಲ್ಲ ಎಂದ ಮೇಲೆ ಮುಂದುವರಿಯುವುದರಲ್ಲಿ ಅರ್ಥವಿಲ್ಲ ಎಂದು ಮೊದಲೇ ಹೇಳಿಕೊಳ್ಳುತ್ತಿದ್ದೆ. ಇದೀಗ ಮೂರನೇ ಟೆಸ್ಟ್ ಗಿಂತ ಮೊದಲೇ ನನ್ನ ಕ್ರಿಕೆಟ್ ಜೀವನದ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಮಿಸ್ಬಾ ಹೇಳಿಕೊಂಡಿದ್ದಾರೆ.
ದ್ವಿತೀಯ ಟೆಸ್ಟ್ ನ ಅಂತಿಮ ದಿನ ಊಟದ ವಿರಾಮದ ನಂತರ ಬ್ಯಾಟಿಂಗ್ ಗೆ ಇಳಿದ ಪಾಕಿಸ್ತಾನ 164 ರನ್ ಗಳಿಸಲು ಸಾಧ್ಯವಾಗದೇ ನಾಟಕೀಯ ಕುಸಿತ ಕಂಡು ಇನಿಂಗ್ಸ್ ಹಾಗೂ 18 ರನ್ ಗಳಿಂದ ಸೋಲನುಭವಿಸಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ