ಐಸಿಸಿ ನೂತನ ಏಕದಿನ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಭಾರತದ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ತಮ್ಮ ಸ್ಥಾನವನ್ನುಳಿಸಿಕೊಳ್ಳುವಲ್ಲಿ ಯಶ ಕಂಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾದ ಸ್ಪೋಟಕ ಬ್ಯಾಟ್ಸಮನ್ ಎಬಿ ಡಿವಿಲಿಯರ್ಸ್ ( 887)ಮೊದಲ ಸ್ಥಾನದಲ್ಲಿ, ಕೊಹ್ಲಿ (813) ಎರಡನೆಯ ಮತ್ತು ದಕ್ಷಿಣ ಆಫ್ರಿಕಾದ ಹಾಶೀಮ್ ಆಮ್ಲಾ( 778) ಮೂರನೆಯ ಸ್ಥಾನದಲ್ಲಿ ಮುಂದುವರೆದಿದ್ದಾರೆ.
ರೋಹಿತ್ ಶರ್ಮಾ 7ನೇ ಸ್ಥಾನಕ್ಕೆ ಕುಸಿದಿದ್ದರೆ, ಆರಂಭಿಕ ಆಟಗಾರ ಶಿಖರ್ ಧವನ್ 8ನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
ಪಾಕಿಸ್ತಾನದ ವಿರುದ್ಧ ಮೈನವಿರೇಳಿಸುವ ಪ್ರದರ್ಶನ ನೀಡಿದ್ದ ಇಂಗ್ಲೆಂಡ್ ಬ್ಯಾಟ್ಸಮನ್ ಜೊಯ್ ರೂಟ್ ಪ್ರಥಮ ಬಾರಿಗೆ ಟಾಪ್ ಐದರೊಳಗೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇತ್ತೀಚಿಗೆ ತವರು ನೆಲದಲ್ಲಿ ಕೊನೆಗೊಂಡ ಏಕದಿನ ಸರಣಿಯಲ್ಲಿ 25 ವರ್ಷದ ರೂಟ್ ಒಟ್ಟು 275 ರನ್ ಕಲೆ ಹಾಕಿದ್ದರು. ಈ ಭರ್ಜರಿ ಪ್ರದರ್ಶನ ನ್ಯೂಜಿಲ್ಯಾಂಡ್‌ನ ಕೇನ್ ವಿಲ್ಲಿಯಮ್ಸನ್ , ಮಾರ್ಟಿನ್ ಗುಪ್ಟಿಲ್ ಮತ್ತು ಭಾರತದ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿ ಜಿಗಿದು ನಾಲ್ಕನೆಯ ಸ್ಥಾನಕ್ಕೇರಲು (776 ಅಂಕ) ಅವರಿಗೆ ಸಹಾಯಕವಾಯಿತು.
ಪಾಕ್ ಜತೆಗಿನ ಸರಣಿ ಬಳಿಕ ಶ್ರೇಯಾಂಕದಲ್ಲಿ ಮೇಲ್ಮುಖವಾಗಿ ಚಲಿಸಿರುವ ನಾಲ್ಕು ಇಂಗ್ಲೆಂಡ್ ಬ್ಯಾಟ್ಸ್‌ಮನ್ ಪೈಕಿ ರೂಟ್ ಸಹ ಒಬ್ಬರಾಗಿದ್ದಾರೆ.
ಬೌಲಿಂಗ್‌ನಲ್ಲಿ ವೆಸ್ಟ್ ಇಂಡೀಸ್ ಬೌಲರ್ ಸುನಿಲ್ ನರೈನ್ ಅಗ್ರಸ್ಥಾನದಲ್ಲಿದ್ದರೆ, ನ್ಯೂಜಿಲ್ಯಾಂಡ್‌ನ ಟ್ರೆಂಚ್ ಬೋಲ್ಟ್ ದ್ವಿತೀಯ ಮತ್ತು ಆಸೀಸ್‌ನ ಮಿಶೆಲ್ ಸ್ಟಾರ್ಕ್ 3ನೇ ಸ್ಥಾನವನ್ನಲಂಕರಿಸಿದ್ದಾರೆ.
ಭಾರತದ ಯಾವ ಬೌಲರ್‌ಗಳು ಟಾಪ್ 10 ಪಟ್ಟಿಯಲ್ಲಿಲ್ಲ. ಆರ್. ಅಶ್ವಿನ್ 12 ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರೆ, ಅಕ್ಷರ್ ಪಟೇಲ್ ಅವರ ಹಿಂದಿನ ಸ್ಥಾನದಲ್ಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ