ನವದೆಹಲಿ: ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಮತ್ತೆ ಕಾಶ್ಮೀರ ವಿಚಾರದಲ್ಲಿ ಭಾರತೀಯ ಪ್ರಧಾನಿ ನರೇಂದ್ರ ಮೋದಿಯನ್ನು ಕೆಣಕುವ ಪ್ರಯತ್ನ ನಡೆಸಿದ್ದು, ಇದಕ್ಕೆ ಗೌತಮ್ ಗಂಭೀರ್ ತಕ್ಕ ತಿರುಗೇಟು ಕೊಟ್ಟಿದ್ದಾರೆ.
ಕೊರೋನಾದಿಂದ ಸಂಕಷ್ಟಕ್ಕೀಡಾದವರಿಗೆ ನೆರವಾಗಲು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಬಂದಿದ್ದ ಅಫ್ರಿದಿ ‘ನಾನು ಜಗತ್ತಿನ ಸುಂದರ ಗ್ರಾಮಕ್ಕೆ ಬಂದಿದ್ದೇನೆ. ಹಲವು ದಿನಗಳಿಂದ ಇಲ್ಲಿಗೆ ಬರಬೇಕೆಂದುಕೊಂಡಿದ್ದೆ. ಜಗತ್ತೇ ಈಗ ಮಹಾಮಾರಿ ಸೋಂಕಿಗೆ ತುತ್ತಾಗಿದೆ. ಆದರೆ ಅದಕ್ಕಿಂತ ದೊಡ್ಡ ರೋಗ ಮೋದಿ ಮನಸ್ಸಿನಲ್ಲಿದೆ’ ಎಂದು ವಿವಾದಾತ್ಮಕವಾಗಿ ಅಫ್ರಿದಿ ಹೇಳಿಕೆ ನೀಡಿದ್ದರು.
ಇದಕ್ಕೆ ಟ್ವಿಟರ್ ಮೂಲಕ ತಿರುಗೇಟು ಕೊಟ್ಟಿರುವ ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ‘ಪಾಕಿಸ್ತಾನದ ಬಳಿ 7 ಲಕ್ಷ ಸೇನೆ, 20 ಕೋಟಿ ಜನರ ಬೆಂಬಲವಿದೆ ಎಂದು 16 ವರ್ಷದ ಶಾಹಿದ್ ಅಫ್ರಿದಿ ಹೇಳುತ್ತೇ ಇದ್ದಾರೆ. ಹಾಗಿದ್ದರೂ ಕಳೆದ 70 ವರ್ಷಗಳಿಂದ ಕಾಶ್ಮೀರಕ್ಕಾಗಿ ಭಿಕ್ಷೆ ಬೇಡುತ್ತಲೇ ಇದ್ದಾರೆ. ಅಫ್ರಿದಿ, ಇಮ್ರಾನ್ ಮತ್ತು ಬಜ್ವಾನಂತಹ ಜೋಕರ್ ಗಳು ಭಾರತ ಮತ್ತು ಪ್ರಧಾನಿ ಮೋದಿ ಬಗ್ಗೆ ಮಾತಿನಲ್ಲಿ ಪೌರುಷ ಮೆರೆಯಲು ಸಾಧ‍್ಯವಷ್ಟೇ. ಆದರೆ ಅವರಿಗೆ ಕಾಶ್ಮೀರ ಯಾವತ್ತೂ ಸಿಗದು. ಬಾಂಗ್ಲಾದೇಶ ನೆನಪಿಲ್ವಾ?’ ಎಂದಿದ್ದಾರೆ. ಅಷ್ಟೇ ಅಲ್ಲದೆ ಈ ಟ್ವೀಟ್ ನ್ನು ಪ್ರಧಾನಿ ಮೋದಿಗೂ ಟ್ಯಾಗ್ ಮಾಡಿದ್ದಾರೆ.