ಸಿಡ್ನಿ: ಭಾರತ ಪ್ರವಾಸ ಮಾಡಿದ ಇಂಗ್ಲೆಂಡ್ ಈಗಾಗಲೇ ಮುಖಭಂಗ ಅನುಭವಿಸಿದೆ. ಮುಂದಿನ ಸರದಿ ಆಸ್ಟ್ರೇಲಿಯಾದ್ದು. ಆದರೆ ಆಂಗ್ರಿ ಯಂಗ್ ಮ್ಯಾನ್ ವಿರಾಟ್ ಕೊಹ್ಲಿಯನ್ನು ಎದುರಿಸುವುದು ತಮಗೆ ಸಮಸ್ಯೆಯೇ ಅಲ್ಲ ಎಂದು ಆಸೀಸ್ ನಾಯಕ ಸ್ಟೀವ್ ಸ್ಮಿತ್ ಹೇಳಿಕೊಂಡಿದ್ದಾರೆ.
ಫೆಬ್ರವರಿ 23 ರಿಂದ ಭಾರತ-ಆಸ್ಟ್ರೇಲಿಯಾ ನಡುವೆ ಟೆಸ್ಟ್ ಸರಣಿ ಆರಂಭವಾಗಲಿದೆ. ಆದರೆ ಇಂಗ್ಲೆಂಡ್ ಗೆ ಆದ ಗತಿ ತಮಗೆ ಬರದು ಸ್ಮಿತ್ ಕೊಚ್ಚಿಕೊಳ್ಳುತ್ತಿದ್ದಾರೆ. ಕಾರಣ, ತಮಗೆ ಕೊಹ್ಲಿಯನ್ನು ಹೇಗೆ ಕಟ್ಟಿಹಾಕಬೇಕೆಂದು ಗೊತ್ತು ಎನ್ನುವುದು ಅವರ ವಾದ.
“ಕೊಹ್ಲಿ ಸ್ವಲ್ಪ ಸೆಂಟಿಮೆಂಟಲ್. ಬೇಗ ಕೋಪಗೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಅವರು ತಮ್ಮ ಶೈಲಿಯನ್ನು ಬದಲಾಯಿಸಿರಬಹುದು. ತವರಿನಲ್ಲಿ ಸಾಕಷ್ಟು ಯಶಸ್ಸು ಕಂಡಿರಬಹುದು. ಆದರೂ ಅವರ ಕೋಪವನ್ನೇ ನಾವು ಲಾಭಕ್ಕೆ ಬಳಸಿಕೊಳ್ಳಲಿದ್ದೇವೆ. ಅವರನ್ನು ಕೆಣಕಿ ಕೋಪಗೊಳ್ಳುವಂತೆ ಮಾಡಿದರೆ ಇಡೀ ಟೀಂ ಇಂಡಿಯಾ ಧೃತಿಗೆಡುತ್ತದೆ” ಎಂದು ಸ್ಮಿತ್ ಸಂದರ್ಶನವೊಂದರಲ್ಲಿ ತಮ್ಮ ಯೋಜನೆಯನ್ನು ಹೊರಗೆಡವಿದ್ದಾರೆ.
ಆದರೂ ಭಾರತ ಪ್ರವಾಸ ಅತ್ಯಂತ ಕಠಿಣದ್ದಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಅವರು ಹೇಳಿದಷ್ಟು ಸುಲಭವಲ್ಲ ಕೊಹ್ಲಿಯ ಏಕಾಗ್ರತೆ ಕೆಡಿಸುವುದು ಎಂದು ಇಲ್ಲಿಗೆ ಬಂದ ಮೇಲೆ ಖಂಡಿತಾ ಅವರ ಅನುಭವಕ್ಕೆ ಬರಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ