ಏಕದಿನ ಸರಣಿಗೆ ಭಾರತ ತಂಡದಿಂದ ಹಿರಿಯ ಆಟಗಾರರನ್ನು ಕೈಬಿಟ್ಟಿರುವುದು, ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದ ಮೇಲೆ ಪರಿಣಾಮ ಬೀರಲಿದೆ ಎನ್ನುವುದು ಕ್ರಿಕೆಟಭಿಮಾನಿಗಳ ಅಭಿಪ್ರಾಯ.
ಏಕದಿನ ತಂಡದಲ್ಲಿ ಹಿರಿಯ ಆಟಗಾರರಾದ ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಅವರನ್ನು ಕೈಬಿಟ್ಟಿದ್ದು, ಆಯ್ಕೆ ಮಂಡಳಿಯ ಈ ನಿಲುವು ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಆದರಂತೆ, ಈ ಮೂವರು ಹಿರಿಯ ಆಟಗಾರರು ನಾಲ್ಕನೇ ಟೆಸ್ಟ್‌ನಲ್ಲಿ ಆಡಲಿದ್ದು, ಅವರ ಆಟದ ಮೇಲೆ ಇದು ಪರಿಣಾಮ ಬೀರಬಹುದು ಎಂದು ಕ್ರಿಕೆಟ್ ಚಿಂತಕರು ಅಭಿಪ್ರಾಯ ಪಟ್ಟಿದ್ದಾರೆ.
ಭಾರತ ತಂಡದ ಟೆಸ್ಟ್ ನಾಯಕ ಅನಿಲ್ ಕುಂಬ್ಳೆ, ಇದು ಮುಂದಿನ ಆಟದ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರದು ಎಂದು ಭರವಸೆ ನೀಡಿದ್ದಾರೆ. ಆದರೆ ಇನ್ನೂ ಒಂದು ಪಂದ್ಯ ಉಳಿದಿರುವಾಗ ಏಕದಿನ ತಂಡವನ್ನು ಆಯ್ಕೆ ಮಾಡಿರುವುದು ಸೂಕ್ತವಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆಟಗಾರರನ್ನು ಕೈ ಬಿಟ್ಟಿರುವುದಿದ್ದರೆ, ಆ ಮೊದಲು ನಡೆಯಬೇಕಾಗಿದ್ದ ಪಂದ್ಯದ ಮೊದಲು ಘೋಷಣೆ ಮಾಡುವುದು ಎಂದಿಗೂ ಸರಿಯಲ್ಲ ಎನ್ನುವುದು ನಾಯಕನ ಮಾತು . ಇದೇ ವೇಳೆ, ತನ್ನ ಸಹ ತಂಡದಿಂದ ಹೊಬಿದ್ದಿರುವ ಹಿರಿಯ ಆಟಗಾರರಿಗೆ, ಅದರ ಬಗ್ಗೆ ಹೆಚ್ಚು ಯೋಚಿಸದೇ, ಗುಣಾತ್ಮಕವಾಗಿ ಆಡಿ ಪಂದ್ಯವನ್ನು ಜಯಿಸೋಣ ಎಂದಿದ್ದಾರೆ.
ಹಿರಿಯ ಆಟಗಾರರಿಗೆ ನಾವು ಅಷ್ಟು ಸುಲಭವಾಗಿ ಮರೆತು ಬಿಡಿ ಎನ್ನಲು ಸಾಧ್ಯವಿಲ್ಲ. ಹಾಗೇ, ನಮ್ಮ ಹಿರಿಯ ಆಟಗಾರರೂ ಕೂಡಾ ಪ್ರಬುದ್ಧರಾಗಿರುವುದರಿಂದ ಇಂತಹ ವಿಷಯಗಳಿಗೆ ಹೆಚ್ಚು ತಲೆಕಡಿಸದೆ ನೈಜ ಆಟ ಆಡಲಿದ್ದಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಿರಿಯರಲ್ಲಿ ಒರ್ವರಾಗಿರುವ ಗಂಗೂಲಿ, ತಂಡದಿಂದ ಕಿತ್ತು ಹಾಕಿರುವುದಕ್ಕೆ ಮೃದುವಾಗಿ ಸ್ಪಂದಿಸಿದ್ದಾರೆ. ನಾನು ಏಕದಿನ ತಂಡದಲ್ಲಿ ಸ್ಥಾನ ನೀಡಲಿಲ್ಲ ಎಂದು ಚಿಂತೆ ಮಾಡುತ್ತಾ ಇರುವುದಿಲ್ಲ. ಮುಂದಿನ ಟೆಸ್ಟ್‌ನ ಕಡೆಗೆ ಗಮನ ಕೇಂದ್ರೀಕರಿಸುತ್ತೇನೆ ಎಂದು ಹೇಳಿದ್ದಾರೆ.