ಮಹತ್ವದ ವಿಷಯಗಳಿಗೆ ಸಂಬಂಧಿಸಿದಂತೆ ಗಂಭೀರ ಚರ್ಚೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮುಂದಾಗಿದ್ದು. ಎಲ್ಲ ಕಾರ್ಯಕಾರಿಣಿಗಳ ಮಂಡಳಿಗಳು ಒಳಗೊಂಡಿರುವ ಸಭೆಯನ್ನು ಸೆಪ್ಟಂಬರ್ 13 ರಂದು ನಡೆಸಲು ಅದು ನಿರ್ಧರಿಸಿದೆ
ಸಾಮಾನ್ಯವಾಗಿ ಬಿಸಿಸಿಐ ಪದೇ ಪದೇ ವಿಶೇಷ ಸಾಮಾನ್ಯ ಸಭೆಯನ್ನು ಕರೆಯುವುದಿಲ್ಲ. ಮುಂಬೈನಲ್ಲಿ ಕೆಲವೇ ದಿನಗಳ ಹಿಂದೆ ವಿಶೇಷ ಸಭೆಯನ್ನು ನಡೆಸಿ, ಐಸಿಎಲ್ ಸೇರಿರುವ ಕ್ರಿಕೆಟಿಗರು ಮತ್ತು ಕಪಿಲ್ ದೇವ್ ಉಚ್ಚಾಟನೆಯ ನಿರ್ಧಾರವನ್ನು ತೆಗೆದುಕೊಂಡಿತ್ತು.
ದೆಹಲಿಯಲ್ಲಿ ಆಯೋಜಿಸಲಾಗಿರುವ ವಿಶೇಷ ಸಭೆಯಲ್ಲಿ ಚರ್ಚೆಗೆ ಬರಲಿರುವ ವಿಷಯಗಳ ಕುರಿತು ಬಿಸಿಸಿಐ ತುಟಿ ಎರಡು ಮಾಡದೇ ಮೌನವಹಿಸಿರುವುದನ್ನು ಗಮನಿಸಿದರೆ ಮಹತ್ವದ ಚರ್ಚೆ ಮತ್ತು ತೀರ್ಮಾನಕ್ಕೆ ಸಭೆ ಕರೆಯಲಾಗಿದೆ ಎಂಬ ಸಂಶಯ ವ್ಯಕ್ತವಾಗುತ್ತಿದೆ.
ಕಪಿಲ್ ಪದಚ್ಯುತಿಯ ನಿರ್ಧಾರದಿಂದ ಅಚ್ಚರಿಗೊಂಡಿರುವ ಐಸಿಎಲ್ ಕೂಡ ದೆಹಲಿ ನ್ಯಾಯಾಲಯದ ಕಟ್ಟೆಯನ್ನು ಎರಿದ್ದು, ಐಸಿಎಲ್ ಸೇರಿರುವ ಕ್ರಿಕೆಟಿಗರಿಗೆ ಹೆದರಿಕೆ ಒಡ್ಡುವುದನ್ನು ತಡೆಯಬೇಕು ಎಂದು ಮನವಿ ಮಾಡಿಕೊಂಡಿದೆ.