Select Your Language

Notifications

webdunia
webdunia
webdunia
webdunia

ಕುಂಬ್ಳೆ-ಭಜ್ಜಿ ಪ್ರತಾಪ: ಐನೂರರ ಗಡಿ ದಾಟಿದ ಭಾರತ

ಕುಂಬ್ಳೆ-ಭಜ್ಜಿ ಪ್ರತಾಪ: ಐನೂರರ ಗಡಿ ದಾಟಿದ ಭಾರತ
ಅಡಿಲೇಡ್ , ಶುಕ್ರವಾರ, 25 ಜನವರಿ 2008 (15:34 IST)
ಅಡಿಲೇಡಿನಲ್ಲಿ ನಡೆಯುತ್ತಿರುವ ಕೊನೆಯ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸಿನಲ್ಲಿ ಭಾರತವು ಎರಡನೇ ದಿನ ನಾಯಕ ಅನಿಲ್ ಕುಂಬ್ಳೆ ಅವರ ಭರ್ಜರಿ 87 ಹಾಗೂ ಹರಭಜನ್ ಅವರ ಆಕರ್ಷಕ 63 ರನ್ನುಗಳ ನೆರವಿನಿಂದ 526 ರನ್ ಪೇರಿಸಿದ್ದು, ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ, ಮೊದಲ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 62 ರನ್ ಮಾಡಿದೆ.

ವಯಸ್ಸಾದರೂ ತನ್ನಲ್ಲಿನ್ನೂ ಬ್ಯಾಟಿಂಗ್ ಸಾಮರ್ಥ್ಯವಿದೆ ಎಂದು ತೋರಿಸಿಕೊಟ್ಟ ಅನಿಲ್ ಕುಂಬ್ಳೆ, ಆಸ್ಟ್ರೇಲಿಯಾ ಆಟಗಾರರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದರು. ಜತೆಯಲ್ಲಿ ಇಶಾಂತ್ ಶರ್ಮಾ 14 ರನ್ ಗಳಿಸಿ ಅಜೇಯರಾಗುಳಿದರು. ಕುಂಬ್ಳೆ-ಇಶಾಂತ್ ಜೋಡಿ ಕೊನೆಯ ವಿಕೆಟಿಗೆ ಸೇರಿಸಿದ ರನ್ನುಗಳ ಸಂಖ್ಯೆ 58.

ಚಹಾ ವಿರಾಮದ ಬಳಿಕ ಕೇವಲ 1 ರನ್ ಸೇರಿಸಿದಾಗ ಕುಂಬ್ಳೆ ಅವರು ಜಾನ್ಸನ್ ಎಸೆತದಲ್ಲಿ ಗಿಲ್‌ಕ್ರಿಸ್ಟ್‌ಗೆ ಕ್ಯಾಚ್ ನೀಡಿದಾಗ ಭಾರತದ ಇನ್ನಿಂಗ್ಸ್ ಕೊನೆಗೊಂಡಿತು.

39ನೇ ಶತಕ ದಾಖಲಿಸಿ ಗಮನ ಸೆಳೆದಿದ್ದ ಸಚಿನ್ ತೆಂಡುಲ್ಕರ್ ಅವರು 153 ರನ್ ಗಳಿಸಿ ಬ್ರೆಟ್ ಲೀಗೆ ವಿಕೆಟ್ ಒಪ್ಪಿಸಿದ ನಂತರ, ಭಾರತದ ಕೊನೆಯ ಕ್ರಮಾಂಕದ ಆಟಗಾರರು, ವಿಶೇಷವಾಗಿ ಕುಂಬ್ಳೆ-ಭಜ್ಜಿ ಜೋಡಿ ಆಸೀಸ್ ಬೌಲರುಗಳನ್ನು ಇನ್ನಿಲ್ಲದಂತೆ ಕಾಡಿದ್ದರು.

ತೆಂಡುಲ್ಕರ್ ಔಟಾದ ಬಳಿಕ ನಾಯಕನನ್ನು ಕೂಡಿಕೊಂಡ ಹರಭಜನ್ ಸಿಂಗ್, ಸೈಮಂಡ್ಸ್ ಎಸೆತದಲ್ಲಿ ಗಿಲ್‌ಕ್ರಿಸ್ಟ್‌ಗೆ ಕ್ಯಾಚ್ ನೀಡುವ ಮುನ್ನ 103 ಎಸೆತಗಳಲ್ಲಿ 7 ಬೌಂಡರಿ ಸಹಿತ 63 ರನ್ ಕಲೆ ಹಾಕಿದ್ದರು. ಜಂಬೋ-ಭಜ್ಜಿ ಜೋಡಿ ಸೇರಿಕೊಂಡು 35 ಓವರುಗಳಲ್ಲಿ 7ನೇ ವಿಕೆಟಿಗೆ 107 ರನ್ ಸೇರಿಸಿರುವುದು ಇಂದಿನ ಆಟದ ಆಕರ್ಷಕ ಭಾಗ.

ಇದಕ್ಕೆ ಮೊದಲು, ಮೊದಲ ದಿನದ ಅಂತ್ಯಕ್ಕೆ 309 ರನ್ ಗಳಿಸಿದ್ದ ಭಾರತ, ಶುಕ್ರವಾರ ಉತ್ತಮ ಆರಂಭವನ್ನೆ ಕಂಡಿತು. ಗುರುವಾರ ಔಟಾಗದೇ 124ರನ್ ಗಳಿಸಿದ್ದ ಸಚಿನ್, ಶುಕ್ರವಾರ ಮತ್ತೆ ಗುಡುಗಿ ಮತ್ತೊಂದು ಅರ್ಧ ಶತಕ ದಾಖಲಿಸಿದರು.

153 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಸಚಿನ್ ಬ್ರೇಟ್ ಲೀ ಬೌಲಿಂಗ್‌ನಲ್ಲಿ ಬ್ರಾಡ್ ಹಾಗ್ ಅವರಿಗೆ ಕ್ಯಾಚಿತ್ತು ನಿರ್ಗಮಿಸಿದರು. ಗುರುವಾರ ಔಟಾಗದೇ ಉಳಿದಿದ್ದ ಇನ್ನೋರ್ವ ಆಟಗಾರ ಧೋನಿ ತಮ್ಮ ಖಾತೆಗೆ 16 ರನ್ ಜಮಾಯಿಸಿ ಜಾನ್ಸನ್‌ಗೆ ಬಲಿಯಾದರು.

ಮಿಶೆಲ್ ಜಾನ್ಸನ್ 126/4 ವಿಕೆಟ್, ಬ್ರೆಟ್ ಲೀ 101/3 ಹಾಗೂ ಕ್ಲಾರ್ಕ್, ಸೈಮಂಡ್ಸ್, ಹಾಗ್ ತಲಾ ಒಂದು ವಿಕೆಟ್ ಕಿತ್ತರು.

ಬ್ಯಾಟಿಂಗ್ ಆರಂಭಿಸಿರುವ ಆಸೀಸ್ ಹೇಡನ್ 36 ಮತ್ತು ಜಾಕಿಸ್ 21 ರನ್ನುಗಳ ಸಹಾಯದಿಂದ 62 ರನ್ ಮಾಡಿದೆ.

Share this Story:

Follow Webdunia kannada