Publish Date: Mon, 12 Jan 2026 (11:08 IST)
Updated Date: Mon, 12 Jan 2026 (11:12 IST)
ಮುಂಬೈ: ಡಬ್ಲ್ಯುಪಿಎಲ್ 2026 ರ ಇಂದಿನ ಪಂದ್ಯದಲ್ಲಿ ಮೊದಲ ಪಂದ್ಯವನ್ನು ರೋಚಕವಾಗಿ ಗೆದ್ದ ಆರ್ ಸಿಬಿಗೆ ಮೊದಲ ಪಂದ್ಯ ಸೋತ ಯುಪಿ ವಾರಿಯರ್ಸ್ ಸವಾಲೊಡ್ಡಲಿದೆ.
ಡಬ್ಲ್ಯುಪಿಎಲ್ 2026 ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆರ್ ಸಿಬಿ ರೋಚಕ 3 ವಿಕೆಟ್ ಗಳ ಗೆಲುವು ಸಾಧಿಸಿತು. ಈ ಥ್ರಿಲ್ಲಿಂಗ್ ಗೆಲುವಿನ ಆತ್ಮವಿಶ್ವಾಸದಲ್ಲೇ ಇಂದು ಯುಪಿ ವಾರಿಯರ್ಸ್ ವಿರುದ್ಧ ಸ್ಮೃತಿ ಮಂಧಾನ ಪಡೆ ಕಣಕ್ಕಿಳಿಯಲಿದೆ.
ಆರ್ ಸಿಬಿ ಕಳೆದ ಪಂದ್ಯ ಗೆದ್ದರೂ ಸಾಕಷ್ಟು ಹುಳುಕುಗಳು ಬಯಲಾಗಿತ್ತು. ಕಳೆದ ಪಂದ್ಯದಲ್ಲಿ ಟಾಪ್ ಆರ್ಡರ್ ಬ್ಯಾಟಿಗರು ಕೈ ಕೊಟ್ಟಿದ್ದರು. ಈ ಮೈನಸ್ ಸರಿಮಾಡಿಕೊಳ್ಳದೇ ಇದ್ದಲ್ಲಿ ಮುಂದಿನ ಹಂತದಲ್ಲಿ ಕಷ್ಟವಾಗಲಿದೆ. ಅನುಭವಿ ಎಲ್ಲಿಸ್ ಪೆರ್ರಿ ಅನುಪಸ್ಥಿತಿ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಕಾಡುತ್ತಿದೆ. ಇದನ್ನು ಸರಿಪಡಿಸಬೇಕಿದೆ.
ಇತ್ತ ಯುಪಿ ವಾರಿಯರ್ಸ್ ಕಳೆದ ಪಂದ್ಯದಲ್ಲಿ ಗುಜರಾತ್ ವಿರುದ್ಧ ಸೋತಿತ್ತು. ಹಾಗಿದ್ದರೂ ಚೇಸಿಂಗ್ ನಲ್ಲಿ ಭಾರೀ ಪೈಪೋಟಿಯನ್ನೇ ನೀಡಿತ್ತು. ಯುಪಿಗೆ ನಾಯಕಿ ಮೆಗ್ ಲ್ಯಾನಿಂಗ್ ಪ್ರಮುಖ ಶಕ್ತಿ. ಆರಂಭಿಕರಾಗಿ ಕಣಕ್ಕಿಳಿಯವ ಅವರು ಸಿಡಿದು ನಿಂತರೆ ನಿಯಂತ್ರಿಸುವುದು ಕಷ್ಟ. ಉಳಿದಂತೆ ಭಾರತೀಯ ತಾರೆಯರಾದ ಹರ್ಲಿನ್ ಡಿಯೋಲ್, ದೀಪ್ತಿ ಶರ್ಮಾ ತಂಡದ ಶಕ್ತಿಗಳು. ಹೀಗಾಗಿ ಇಂದಿನ ಪಂದ್ಯದಲ್ಲಿ ಪೈಪೋಟಿ ನಿರೀಕ್ಷಿಸಬಹುದಾಗಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದ್ದು ಸ್ಟಾರ್ ಸ್ಪೋರ್ಟ್ಸ್ ಅಥವಾ ಜಿಯೋ ಹಾಟ್ ಸ್ಟಾರ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.