Publish Date: Fri, 10 Sep 2021 (11:27 IST)
Updated Date: Fri, 10 Sep 2021 (09:29 IST)
ಮ್ಯಾಂಚೆಸ್ಟರ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದಿನಿಂದ ಮ್ಯಾಂಚೆಸ್ಟರ್ ನಲ್ಲಿ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ನಡೆಯಲಿದ್ದು, ಟೀಂ ಇಂಡಿಯಾದಲ್ಲಿ ನಾಯಕ ಕೊಹ್ಲಿ ಈ ಮೂರು ಬದಲಾವಣೆ ಮಾಡುತ್ತಾರಾ ಎಂಬ ಕುತೂಹಲ ಮೂಡಿದೆ.
ಇಂಗ್ಲೆಂಡ್ ಪ್ರವಾಸ ಮಾಡಿರುವ ಟೀಂ ಇಂಡಿಯಾದಲ್ಲಿ ಇದುವರೆಗೆ ರವಿಚಂದ್ರನ್ ಅಶ್ವಿನ್ ಗೆ ಸ್ಥಾನ ಸಿಕ್ಕಿಲ್ಲ. ಹೀಗಾಗಿ ಅವರನ್ನು ಜಡೇಜಾ ಬದಲಿಗೆ ಕಣಕ್ಕಿಳಿಸಲಿ ಎಂಬುದು ಅಭಿಮಾನಿಗಳ ಆಶಯ.
ಇನ್ನು ಕಳೆದ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಬೌಲಿಂಗ್ ಪೇಲವವಾಗಿತ್ತು. ಯುವ ಬೌಲರ್ ನ ಬದಲಿಗೆ ಮತ್ತೆ ಅನುಭವಿ ಇಶಾಂತ್ ಶರ್ಮಾಗೆ ಅವಕಾಶ ನೀಡಿದರೂ ಅಚ್ಚರಿಯಿಲ್ಲ. ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಉಮೇಶ್ ಯಾದವ್ ಸ್ಥಾನ ಉಳಿಸಿಕೊಳ್ಳುವ ಸಾಧ‍್ಯತೆಯಿದೆ.
ಇನ್ನು, ಬ್ಯಾಟಿಂಗ್ ನಲ್ಲಿ ಪದೇ ಪದೇ ವೈಫಲ್ಯಕ್ಕೊಳಗಾಗಿರುವ ಅಜಿಂಕ್ಯಾ ರೆಹಾನೆ ಬದಲಿಗೆ ಯುವ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ಅಥವಾ ಹನುಮ ವಿಹಾರಿಗೆ ಸ್ಥಾನ ನೀಡಬಹುದು ಎಂಬ ಆಶಾಭಾವನೆಯಿದೆ.