Publish Date: Wed, 12 Jun 2024 (11:02 IST)
Updated Date: Wed, 12 Jun 2024 (11:08 IST)
ನ್ಯೂಯಾರ್ಕ್: ಟಿ20 ವಿಶ್ವಕಪ್ ನಲ್ಲಿ ಕಳೆದ ಎರಡು ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿದು ವೈಫಲ್ಯಕ್ಕೀಡಾದ ಬೆನ್ನಲ್ಲೇ ವಿರಾಟ್ ಕೊಹ್ಲಿ ತಮ್ಮ ಮೆಚ್ಚಿನ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಅವರನ್ನು ಭೇಟಿಯಾಗಿದ್ದಾರೆ.
ಟಿ20 ವಿಶ್ವಕಪ್ ನಲ್ಲಿ ಇದುವರೆಗೆ ಭಾರತ ಐರ್ಲೆಂಡ್ ಮತ್ತು ಪಾಕಿಸ್ತಾನ ವಿರುದ್ಧ ಪಂದ್ಯವಾಡಿದೆ. ಈ ಎರಡೂ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕ್ರಮವಾಗಿ 1 ಮತ್ತು 4 ರನ್ ಗಳಷ್ಟೇ ಗಳಿಸಲು ಶಕ್ತರಾಗಿದ್ದರು. ಆದರೆ ಭಾರತ ತಂಡ ಎರಡೂ ಪಂದ್ಯಗಳನ್ನು ಗೆದ್ದುಕೊಂಡಿತ್ತು.
ಹಾಗಿದ್ದರೂ ಕೊಹ್ಲಿ ಫಾರ್ಮ್ ಮಾಜಿ ಕ್ರಿಕೆಟಿಗರಿಂದಲೂ ಟೀಕೆಗೊಳಗಾಗಿದೆ. ಕೆಲವರು ಕೊಹ್ಲಿಯನ್ನು ಮತ್ತೆ ಮೂರನೇ ಕ್ರಮಾಂಕದಲ್ಲಿ ಆಡಲಿಳಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆಯೇ ಕೊಹ್ಲಿ ತಮ್ಮ ಮೆಚ್ಚಿನ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಅವರನ್ನು ಭೇಟಿ ಮಾಡಿದ್ದಾರೆ.
ಈ ಇಬ್ಬರೂ ದಿಗ್ಗಜರ ಭೇಟಿಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಸಚಿನ್ ತೆಂಡುಲ್ಕರ್ ಗೆ ಕೊಹ್ಲಿ ಎಷ್ಟು ಗೌರವ ಕೊಡುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. 50 ನೇ ಶತಕ ಸಿಡಿಸಿದಾಗಲೂ ಮಂಡಿಯೂರಿ ಮೈದಾನದಲ್ಲೇ ಸಚಿನ್ ಗೆ ಗೌರವ ಸೂಚಿಸಿದ್ದರು. ಇದೀಗ ಕಳಪೆ ಫಾರ್ಮ್ ನಲ್ಲಿರುವಾಗ ಸಚಿನ್ ಜೊತೆ ಮಾತುಕತೆ ನಡೆಸಿದ್ದು, ಇಂದು ಅವರು ಖಂಡಿತಾ ಕ್ಲಿಕ್ ಆಗುತ್ತಾರೆ ಎಂದು ಅಭಿಮಾನಿಗಳು ಆಶಿಸಿದ್ದಾರೆ.