ಚಿತ್ರದುರ್ಗ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಟ್ಟಾ ಅಭಿಮಾನಿ ಯುವಕರ ಗುಂಪೊಂದು ವಿರಾಟ್ ಕೊಹ್ಲಿ ಕಟೌಟ್ ಮುಂದೆ ಕುರಿ ಕಡಿದು ಈಗ ಕಂಬಿ ಎಣಿಸುವಂತಾಗಿದೆ.
ಚಿತ್ರದುರ್ಗದಲ್ಲಿ ಈ ಘಟನೆ ನಡೆದಿದೆ. ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನ ಸಣ್ಣ ಪಾಳಯ್ಯ, ಜಯಣ್ಣ ಮತ್ತು ತಿಪ್ಪೇಸ್ವಾಮಿ ಎಂದ ಯುವಕರನ್ನು ಈ ಸಂಬಂಧ ಪೊಲೀಸರು ಬಂಧಿಸಿದ್ದಾರೆ.
ಐಪಿಎಲ್ ನಲ್ಲಿ ಮೊನ್ನೆಯಷ್ಟೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಿಎಸ್ ಕೆ ವಿರುದ್ಧ ರೋಚಕವಾಗಿ ಗೆಲುವು ಸಾಧಿಸಿತ್ತು. ಈ ಗೆಲುವಿನ ಸಂಭ್ರಮಾಚರಣೆ ಸಂದರ್ಭ ಈ ಯುವಕರು ಕುರಿ ಕಡಿದಿದ್ದಾರೆ.
ಕೃತ್ಯವೆಸಗಿದ ಬಳಿಕ ಯುವಕರು ಇದನ್ನು ವಿಡಿಯೋ ಮಾಡಿ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿದ್ದು ಸಾಕಷ್ಟು ಜನ ಯುವಕರ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಚಿತ್ರದುರ್ಗ ಪೊಲೀಸರು ದೂರು ದಾಖಲಿಸಿಕೊಂಡು ಯುವಕರನ್ನು ಬಂಧಿಸಿದ್ದಾರೆ.