ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಎದುರಾಳಿ ಬ್ಯಾಟಿಗ ಡೀನ್ ಎಲ್ಗರ್ ವಿರುದ್ಧ ಬಂದಿದ್ದ ನಾಟೌಟ್ ತೀರ್ಪು ಭಾರತೀಯ ಆಟಗಾರರನ್ನು ಕೆರಳಿಸಿದೆ.
ಅಶ್ವಿನ್ ಬೌಲಿಂಗ್ ನಲ್ಲಿ ಫೀಲ್ಡ್ ಅಂಪಾಯರ್ ಎಲ್ ಬಿಡಬ್ಲ್ಯು ನೀಡಿದ್ದರು. ಆದರೆ ಡೀನ್ ಡಿಆರ್ ಎಸ್ ಗೆ ಮನವಿ ಸಲ್ಲಿಸಿದರು. ಈ ವೇಳೆ ಬಾಲ್ ಬಾಲ್ ಇನ್ ಲೈನ್ ನಲ್ಲಿ ಪಿಚ್ ಆಗಿದ್ದು ಸ್ಪಷ್ಟವಾಗಿತ್ತು. ಹೀಗಾಗಿ ಅವರೂ ಔಟ್ ಆಗಿರಬಹುದೆಂದು ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಲು ಆರಂಭಿಸಿದ್ದರು.
ಆದರೆ ಬಾಲ್ ಟ್ರ್ಯಾಕಿಂಗ್ ಮೂಲಕ ಥರ್ಡ್ ಅಂಪಾಯರ್ ನಾಟೌಟ್ ಘೋಷಿಸಿದರು. ಇದು ಭಾರತೀಯ ಆಟಗಾರರನ್ನು ಕೆರಳಿಸಿತು. ನಾಯಕ ಕೊಹ್ಲಿ ನೇರವಾಗಿ ಸ್ಟಂಪ್ ಮೈಕ್ರೋಫೋನ್ ಬಳಿ ಬಂದು, ಕೇವಲ ನಮ್ಮ ತಂಡದ ಮೇಲೆ ಮಾತ್ರವಲ್ಲ, ನಿಮ್ಮ ತಂಡದ ಆಟಗಾರರ ಮೇಲೂ ಗಮನ ಕೊಡಿ ಎಂದು ಕೆಂಡ ಕಾರಿದರು. ಇನ್ನು, ಉಪನಾಯಕ ಕೆಎಲ್ ರಾಹುಲ್ ಇಡೀ ದೇಶವೇ 11 ಆಟಗಾರರ ವಿರುದ್ಧ ಆಡುತ್ತಿದೆ ಎಂದು ಕಿಡಿ ಕಾರಿದರು. ಸ್ಪಿನ್ನರ್ ಅಶ್ವಿನ್ ಬಾಲ್ ಟ್ರ್ಯಾಕಿಂಗ್ ಟೆಕ್ನಾಲಜಿ ಒದಗಿಸುವ ಬ್ರಾಡ್ ಕಾಸ್ಟಿಂಗ್ ಸಂಸ್ಥೆಯ ವಿರುದ್ಧವೇ ಆಕ್ರೋಶ ಹೊರಹಾಕಿದರು. ಈ ವಿಚಾರ ಈಗ ಭಾರೀ ವೈರಲ್ ಆಗಿದೆ.