ಮುಂಬೈ: ವಿರಾಟ್ ಕೊಹ್ಲಿ ಟೀಂ ಇಂಡಿಯಾ ನಾಯಕರಾಗಿದ್ದಾಗ ರೋಹಿತ್ ಶರ್ಮಾ ಮತ್ತು ಅವರ ನಡುವೆ ಭಿನ್ನಾಭಿಪ್ರಾಯವಿದೆ ಎಂದು ಸುದ್ದಿಯಾಗಿತ್ತು. ಆದರೆ ಇದನ್ನು ಹಲವರು ತಳ್ಳಿ ಹಾಕಿದ್ದರು. ಆದರೆ ಭಿನ್ನಾಭಿಪ್ರಾಯವಿದ್ದಿದ್ದು ನಿಜ ಎಂಬುದನ್ನು ಈಗ ಮಾಜಿ ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಒಪ್ಪಿಕೊಂಡಿದ್ದಾರೆ.
ಆರ್. ಶ್ರೀಧರ್ ಅವರು ತಮ್ಮ ಪುಸ್ತಕದಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ತಂಡದಲ್ಲಿ ಕೊಹ್ಲಿ ಗ್ಯಾಂಗ್ ಮತ್ತು ರೋಹಿತ್ ಗ್ಯಾಂಗ್ ಎಂದು ಎರಡು ಪಂಗಡಗಳಿತ್ತು. ಆದರೆ ಇದನ್ನು ಕೋಚ್ ರವಿಶಾಸ್ತ್ರಿ ಹೆಚ್ಚು ಬೆಳೆಯಲು ಬಿಡಲಿಲ್ಲ ಎಂದಿದ್ದಾರೆ.
2019 ರ ವಿಶ್ವಕಪ್ ಸೋಲಿನ ಬಳಿಕ ಕೊಹ್ಲಿ, ರೋಹಿತ್ ನಡುವೆ ವೈಮನಸ್ಯವಾಗಿತ್ತು. ಇಬ್ಬರೂ ಪ್ರತ್ಯೇಕ ಪಂಗಡ ಹೊಂದಿದ್ದಾರೆ ಎಂದು ಸುದ್ದಿಯಾಗಿತ್ತು. ಇದಕ್ಕೆ ತಕ್ಕಂತೆ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಒಬ್ಬರನ್ನೊಬ್ಬರು ಅನ್ ಫಾಲೋ ಮಾಡಿಕೊಂಡಿದ್ದರು. ವಿಶ್ವಕಪ್ ಬಳಿಕ ಕೆಲವೇ ದಿನಗಳಲ್ಲಿ ನಾವು ವಿಂಡೀಸ್ ಸರಣಿಗೆ ತೆರಳಿದ್ದೆವು. ಆಗ ಕೋಚ್ ರವಿಶಾಸ್ತ್ರಿ ಮಾಡಿದ ಮೊದಲ ಕೆಲಸವೇನೆಂದರೆ ಇಬ್ಬರನ್ನೂ ತಮ್ಮ ಕೊಠಡಿಗೆ ಕರೆಸಿಕೊಂಡು ಇಬ್ಬರೂ ಭಾರತೀಯ ಕ್ರಿಕೆಟ್ ಗೆ ಎಷ್ಟು ಮುಖ್ಯ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ತಂಡಕ್ಕಾಗಿ ಇಬ್ಬರೂ ಒಂದಾಗಿರಬೇಕು ಎಂದು ರವಿಶಾಸ್ತ್ರಿ ಬುದ್ಧಿ ಹೇಳಿದ್ದರು. ಹೀಗಾಗಿ ಇದು ಅಲ್ಲಿಗೇ ತಣ್ಣಗಾಯಿತು ಎಂದು ಶ್ರೀಧರ್ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.