ಬೆಂಗಳೂರು: ಟೆಸ್ಟ್ ಕ್ರಿಕೆಟ್ಗೆ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಿದ ಹಿನ್ನೆಲೆ, ತಮ್ಮ ನೆಚ್ಚಿನ ಆಟಗಾರನಿಗೆ ಗೌರವ ನೀಡುವ ಸಲುವಾಗಿ ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಕೊಹ್ಲಿ ಅಭಿಮಾನಿಗಳು ಬಿಳಿಯ ಜರ್ಸಿ ಧರಿಸಿ ಬಂದಿದ್ದರು. ಕೊಹ್ಲಿಯ ಐಕಾನಿಕ್ ನಂ. 18 ಭಾರತ ಟೆಸ್ಟ್ ಜರ್ಸಿಯನ್ನು ಧರಿಸಿ ತಮ್ಮ ನೆಚ್ಚಿನ ಆಟಗಾರನಿಗೆ ಗೌರವ ಸೂಚಿಸಲು ಅಪಾರ ಸಂಖ್ಯೆಯಲ್ಲಿ ಬಂದಿದ್ದರು.
ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ IPL 2025 ಪಂದ್ಯವು ಬೆಂಗಳೂರಿನಲ್ಲಿ ನಿರಂತರ ಮಳೆಯಿಂದಾಗಿ ರದ್ದಾಯಿತು. ಇದು ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಭಾರೀ ಬೇಸರ ನೀಡಿತು.
ಆರ್ಸಿಬಿ ಅಭಿಮಾನಿಗಳು ಕೊಹ್ಲಿಯ ಐಕಾನಿಕ್ ನಂ. 18 ಭಾರತ ಟೆಸ್ಟ್ ಜರ್ಸಿಯನ್ನು ಧರಿಸಿದ್ದರಿಂದ ಚಿನ್ನಸ್ವಾಮಿ ಸ್ಟೇಡಿಯಂ ಬಿಳಿಯ ಸಮುದ್ರದಂತೆ ಕಂಡಿತು. ಆನ್ಲೈನ್ನಲ್ಲಿ ಶುರುವಾದ ಜೆರ್ಸಿ ಅಭಿಯಾನದಿಂದ ಅಪಾರ ಸಂಖ್ಯೆಯಲ್ಲಿ ಬಿಳಿ ಜರ್ಸಿ ಧರಿಸಿ ಆಗಮಿಸಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನ ವಿಡಿಯೋವೊಂದು ಭಾರೀ ವೈರಲ್ ಆಗಿದೆ. ಅದರಲ್ಲಿ ಬಿಳಿಯ ಹಿಂಡಿನ ಪಕ್ಷಿಯೊಂದು ಸ್ಟೇಡಿಯಂ ನ ಸುತ್ತಾ ಹಾರಾಡಿದೆ. ಇದನ್ನು ನೋಡಿದ ಕ್ರಿಕೆಟ್ ಅಭಿಮಾನಿಗಳು, ಪ್ರಾಣಿ ಸಂಕುಲವು ಕೊಹ್ಲಿಗೆ ಈ ಮೂಲಕ ವಿಶೇಷವಾಗಿ ಗೌರವ ಸಲ್ಲಿಸಿದೆ ಎಂದು ಕೊಂಡಾಡಿದ್ದಾರೆ.
ಪ್ರಕೃತಿಯು ಕೂಡಾ ರಾಜನಿಗೆ ಟ್ರಿಬ್ಯೂಟ್ ಕೊಡ್ತಾ ಇದೆ ಎಂದು ಈ ವಿಡಿಯೋವನ್ನು ವೈರಲ್ ಮಾಡಲಾಗಿದೆ.
ಈ ವಾರದ ಆರಂಭದಲ್ಲಿ ಕೊಹ್ಲಿ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳಲ್ಲಿ ಪೋಸ್ಟ್ ಮೂಲಕ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು. ಈ ನಿರ್ಧಾರವು ಆಶ್ಚರ್ಯಕರವಾಗಿತ್ತು, ಏಕೆಂದರೆ ಅವರು ಭಾರತದ ಮುಂಬರುವ ಐದು ಪಂದ್ಯಗಳ ಟೆಸ್ಟ್ ಪ್ರವಾಸದ ಇಂಗ್ಲೆಂಡ್ನ ಭಾಗವಾಗಬಹುದೆಂದು ನಿರೀಕ್ಷಿಸಲಾಗಿತ್ತು ಮತ್ತು ಈ ವರ್ಷದ ಆರಂಭದಲ್ಲಿ ದೆಹಲಿಗಾಗಿ ರಣಜಿ ಟ್ರೋಫಿಯಲ್ಲಿ ಸಹ ಕಾಣಿಸಿಕೊಂಡಿದ್ದರು.
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ ನಂತರ ಕೊಹ್ಲಿ ಫಾರ್ಮ್ ಅನ್ನು ಮರಳಿ ಪಡೆಯಲು ದೇಶೀಯ ಕ್ರಿಕೆಟ್ಗೆ ಮರಳಿದರು. ಆದರೆ ನಡೆಯುತ್ತಿರುವ ಐಪಿಎಲ್ ಋತುವಿನ ಮಧ್ಯದಲ್ಲಿ, ಮಾಜಿ ಭಾರತ ನಾಯಕ ರೆಡ್-ಬಾಲ್ ಕ್ರಿಕೆಟ್ನಿಂದ ದೂರವಿರುವುದಾಗಿ ಪ್ರಕಟಿಸಿದರು.
ಇದು ಕೊಹ್ಲಿ ಅಭಿಮಾನಿಗಳಿಗೆ ಮತ್ತು ಕ್ರಿಕೆಟ್ ಜಗತ್ತಿಗೆ ಶಾಕ್ ನೀಡಿತು.