ರೈಸಿಂಗ್ ಪುಣೆ ಸೂಪರ್ ಜೈಂಟ್ಸ್(ಆರ್‌ಪಿಎಸ್) ಮತ್ತು ಗುಜರಾತ್ ಲಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳನ್ನು ಬದಲಿಸಿದ ಎರಡು ತಂಡಗಳಾಗಿದ್ದು, ಈ ಸೀಸನ್ ಐಪಿಎಲ್‌ನಲ್ಲಿ ತದ್ವಿರುದ್ಧ ಕಥೆಗಳನ್ನು ಹೊಂದಿವೆ. ಪುಣೆಗೆ ಮಹೇಂದ್ರ ಸಿಂಗ್ ಧೋನಿ ನೇತೃತ್ವ ವಹಿಸಿದ್ದು, ಚೊಚ್ಚಲ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ನೀಡಿದೆ. ಸುರೇಶ್ ರೈನಾ ನೇತೃತ್ವದ ಗುಜರಾತ್ ಲಯನ್ಸ್ ಮೊದಲ ಸೀಸನ್‌ನಲ್ಲೇ ಪ್ಲೇಆಫ್‌ಗೆ ಫೇವರಿಟ್ ಎನಿಸಿದೆ.
ಅಭಿಯಾನದ ಆರಂಭದಲ್ಲೇ ಗುಜರಾತ್ ಲಯನ್ಸ್ ಟಾಪ್ 3ರಲ್ಲಿದ್ದರೆ, ಪುಣೆ ತಳಭಾಗಕ್ಕೆ ಕುಸಿದಿದ್ದು, ಅಂತಿಮವಾಗಿ ತನ್ನ 8ನೇ ಪಂದ್ಯದಲ್ಲೂ ಸನ್ ರೈಸರ್ಸ್ ವಿರುದ್ಧ ನಾಲ್ಕು ರನ್‌ಗಳಿಂದ ಸೋತಿದೆ.
ಪುಣೆಯ ಟಾಪ್ ಆಟಗಾರರಾದ ಕೆವಿನ್ ಪೀಟರ್ಸನ್, ಸ್ಟೀವ್ ಸ್ಮಿತ್ ಮತ್ತು ಪ್ಲೆಸಿಸ್ ಗಾಯಗಳಿಂದ ಆಡುತ್ತಿಲ್ಲವಾದ್ದರಿಂದ ಬ್ಯಾಟಿಂಗ್ ವಿಭಾಗವನ್ನು ಗಣನೀಯವಾಗಿ ದುರ್ಬಲಗೊಳಿಸಿದೆ.
ಇವೆಲ್ಲ ಸಂಕಷ್ಟಗಳ ಜತೆಗೆ ಆಲ್‌ರೌಂಡರ್ ಮಿಚೆಲ್ ಮಾರ್ಶ್ ಕೂಡ ಗಾಯಗೊಂಡು ಸ್ವದೇಶಕ್ಕೆ ಹಿಂತಿರುಗಬೇಕಿದ್ದು, ಧೋನಿಯ ಸ್ವಂತ ಫಾರಂ ಕೂಡ ಚೆನ್ನಾಗಿಲ್ಲವಾದ್ದರಿಂದ ಪುಣೆ ತಂಡವನ್ನು ಮತ್ತಷ್ಟು ದುರ್ಬಲಗೊಳಿಸಿದೆ.
ಲೆಗ್‌ಸ್ಪಿನ್ನರ್ ಅಡಾಂ ಜಂಪಾ ತಮ್ಮ ಚೊಚ್ಚಲು ಪ್ರವೇಶದ ಬಳಿಕ ದಾಪುಗಾಲು ಹಾಕಿದ್ದು ಅವರ 19 ರನ್‌ಗೆ 6 ವಿಕೆಟ್ ಐಪಿಎಲ್ ಪರ ಎರಡನೇ ಅತ್ಯುತ್ತಮ ಸಾಧನೆಯಾಗಿದ್ದು, ಅದರಿಂದ ಕೂಡ ಪುಣೆ ತಂಡದ ಭವಿಷ್ಯ ಬದಲಿಸಲು ಸಾಧ್ಯವಾಗಿಲ್ಲ.