ರಾಷ್ಟ್ರೀಯ ಉದ್ದೀಪನಾ ಮದ್ದು ಸೇವನೆ ತಡೆ ಘಟಕ(ನಾಡಾ) ಕುಸ್ತಿಪಟು ನರಸಿಂಗ್ ಯಾದವ್ ಅವರಿಗೆ ಡೋಪಿಂಗ್ ಆರೋಪಗಳಿಂದ ಕ್ಲೀನ್ ಚಿಟ್ ನೀಡಿದ್ದು, ಅವರಿಗೆ ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಅವಕಾಶ ನೀಡಿದೆ. 74 ಕೆಜಿ ಫ್ರೀಸ್ಟೈಲ್ ವಿಭಾಗದ ಕುಸ್ತಿಪಟು ನರಸಿಂಗ್ ಯಾದವ್ ಕಳೆದ ಬಾರಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದು ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದರು.
ನಾಡಾ ನಡೆಸಿದ್ದ ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಪಾಸಿಟೀವ್ ಫಲಿತಾಂಶ ಕಂಡುಬಂದಿದ್ದರಿಂದ ನರಸಿಂಗ್ ಅವರನ್ನು ರಿಯೋ ಒಲಿಂಪಿಕ್ಸ್‌ನಿಂದ ಕೈಬಿಡಲಾಗಿತ್ತು.
ನರಸಿಂಗ್ ಅವರು ತಮ್ಮನ್ನು ಎದುರಾಳಿಗಳು ಹಗರಣದಲ್ಲಿ ಸಿಕ್ಕಿಬೀಳುವಂತೆ ಮಾಡಿದ್ದಾರೆಂದು ಆರೋಪಿಸಿದ್ದರು. ತಮ್ಮ ಆಹಾರಕ್ಕೆ ಉದ್ದೀಪನ ಮದ್ದು ಬೆರೆಸಿ ಪಿತೂರಿ ಹೂಡಲಾಗಿದೆಯೆಂದು ಆರೋಪಿಸಿದ್ದರು.
ಹಿಂದೆ ಜೂನ್ 2ರವರೆಗೆ ಅವರ ಯಾವುದೇ ಮೂತ್ರದ ಮಾದರಿ ಪಾಸಿಟಿವ್ ಆಗಿರಲಿಲ್ಲ. ಆದ್ದರಿಂದ ಒಂದು ಬಾರಿ ಉದ್ದೀಪನ ಮದ್ದು ಸೇವನೆ ಉದ್ದೇಶಪೂರ್ವಕವಲ್ಲ ಎಂದು ತೀರ್ಮಾನಿಸಿದ ಸಮಿತಿ ಅವರಿಗೆ ಕ್ಲೀನ್ ಚಿಟ್ ನೀಡಿದೆ ಎಂದು ನಾಡಾ ಡಿಜಿ ಅಗರವಾಲ್ ತೀರ್ಪನ್ನು ಓದುತ್ತಾ ಹೇಳಿದ್ದಾರೆ.