ದುಬೈ: ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಸೂಪರ್ ಫೋರ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿದೆ.
ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್-ರಾಹುಲ್ ಜೋಡಿ ಉತ್ತಮ ಅಡಿಪಾಯ ಹಾಕಿಕೊಟ್ಟಿತು. 5 ಓವರ್ ಗಳಲ್ಲಿ ಮೊತ್ತ 50 ದಾಟಿದಾಗ ರೋಹಿತ್ ಬಿಗ್ ಹಿಟ್ ಗೆ ಕೈ ಹಾಕಲು ಹೋಗಿ ವಿಕೆಟ್ ಒಪ್ಪಿಸಿದರು. ಇಂದು ಕೆಎಲ್ ರಾಹುಲ್ ಆರಂಭದಲ್ಲಿ ವೇಗದ ಬ್ಯಾಟಿಂಗ್ ನಡೆಸಿದರೂ ಮತ್ತೆ ದೊಡ್ಡ ಮೊತ್ತ ಗಳಿಸಲು ವಿಫಲವಾದರು. ರೋಹಿತ್, ರಾಹುಲ್ ತಲಾ 28 ರನ್ ಗಳಿಸಿದರು.
ಆದರೆ ಮಧ್ಯಮ ಕ್ರಮಾಂಕದಲ್ಲಿ ಕೊಹ್ಲಿ ಬಿಟ್ಟರೆ ಉಳಿದವರು ನಿಂತು ಆಡುವ ಧೈರ್ಯ ಮಾಡಲಿಲ್ಲ. ಕಳೆದ ಪಂದ್ಯದ ಹೀರೋ ಹಾರ್ದಿಕ್ ಶೂನ್ಯಕ್ಕೆ ನಿರ್ಗಮಿಸಿದರೆ ರಿಷಬ್ ಕೇವಲ 9 ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್ ಕೊಡುಗೆ ಕೇ ವಲ 13. ದೀಪಕ್ ಹೂಡಾ ರನ್ ಗತಿ ಹೆಚ್ಚಿಸಲು ಹೋಗಿ 16 ರನ್ ಗೆ ವಿಕೆಟ್ ಒಪ್ಪಿಸಿದರು. ಒಂದು ವೇಳೆ ಮಧ‍್ಯಮ ಕ್ರಮಾಂಕದಲ್ಲಿ ಒಬ್ಬ ಆಟಗಾರ ಕೊಹ್ಲಿಗೆ ಸಾಥ್ ಕೊಡುತ್ತಿದ್ದರೆ ಮೊತ್ತ 200 ತಲುಪುತ್ತಿತ್ತು.
ಆದರೆ ಏಕಾಂಗಿ ಹೋರಾಟ ನಡೆಸಿದ ಕಿಂಗ್ ಕೊಹ್ಲಿ 44 ಎಸೆತಗಳಿಂದ 60 ರನ್ ಗಳಿಸಿ ಕೊನೆಯ ಓವರ್ ನಲ್ಲಿ ರನೌಟ್ ಆದರು. ವಿಶೇಷವಾಗಿ ಕೊಹ್ಲಿ ಆಟದಲ್ಲಿ ಎಂದಿನ ಚುರುಕುತನ, ಆತ್ಮವಿಶ್ವಾಸ ಕಂಡುಬರುತ್ತಿತ್ತು. ಪಾಕ್ ಪರ ಶಹದಾಬ್ ಖಾನ್ 2 ವಿಕೆಟ್ ಕಬಳಿಸಿದರು.