Publish Date: Wed, 18 Feb 2026 (19:12 IST)
Updated Date: Wed, 18 Feb 2026 (19:14 IST)
ಕೊಲಂಬೊ: ಪಾಕಿಸ್ತಾನ ತಂಡವು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಎಂಟನೇ ತಂಡವಾಗಿ ಸೂಪರ್ ಎಂಟರ ಘಟ್ಟಕ್ಕೆ ಲಗ್ಗೆ ಹಾಕಿದೆ. ಬುಧವಾರ ನಡೆದ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ನಮೀಬಿಯಾ ತಂಡವನ್ನು ಮಣಿಸಿ ಮುಂದಿನ ಸುತ್ತು ಪ್ರವೇಶಿಸಿದೆ.
ಸಾಹಿಬ್‌ಝಾದ ಫರ್ಹಾನ್ ಅವರ ಶತಕ ಹಾಗೂ ಉಸ್ಮಾನ್ ತಾರಿಖ್ ಮತ್ತು ಶದಾಬ್ ಖಾನ್ ಅವರ ಸ್ಪಿನ್ ಮೋಡಿಯ ಸಹಾಯದಿಂದ ಪಾಕಿಸ್ತಾನ ತಂಡ, ನಮೀಬಿಯಾ ತಂಡವನ್ನು ತನ್ನ ಕೊನೆಯ ಲೀಗ್ ಪಂದ್ಯದಲ್ಲಿ 102 ರನ್‌ಗಳಿಂದ ಮಣಿಸಿತು.
ಸಲ್ಮಾನ್ ಅಲಿ ಆಘಾ ನಾಯಕತ್ವದ ಪಾಕ್ ತಂಡದ ಸೋಲನ್ನು ಬಯಸುತ್ತಿದ್ದ ಯುಎಸ್‌ಎ ತಂಡ ಅಧಿಕೃತವಾಗಿ ಚುಟುಕು ವಿಶ್ವಕಪ್ ಟೂರ್ನಿಯಿಂದ ಹೊರ ನಡೆಯಿತು. ನಮೀಬಿಯಾ ತಂಡ ಒಂದೂ ಗೆಲುವು ಕಾಣದೆ ಈ ಟೂರ್ನಿಯಲ್ಲಿನ ತನ್ನ ಅಭಿಯಾನವನ್ನು ಮುಗಿಸಿತು.
ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಪಾಕಿಸ್ತಾನ ತಂಡ ನೀಡಿದ್ದ 200 ರನ್‌ಗಳ ಗುರಿಯನ್ನು ಹಿಂಬಾಲಿಸಿದ ನಮೀಬಿಯಾ ತಂಡ, ಶದಾಬ್ ಖಾನ್ ಮತ್ತು ಉಸ್ಮಾನ್ ತಾರಿಖ್ ಅವರ ಸ್ಪಿನ್ ಮೋಡಿಗೆ ನಲುಗಿತು. ಆ ಮೂಲಕ 17.3 ಓವರ್‌ಗಳಿಗೆ 97 ರನ್‌ಗಳಿಗೆ ಆಲ್‌ಔಟ್ ಆಯಿತು.
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಪಾಕಿಸ್ತಾನ ತಂಡ, ಸಾಹಿಬ್‌ಝಾದ ಅವರ ಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 3 ವಿಕೆಟ್‌ಗಳ ನಷ್ಟಕ್ಕೆ 199 ರನ್‌ಗಳನ್ನು ಕಲೆ ಹಾಕಿತ್ತು.ಸಾಹಿಬ್‌ಝಾದ ಫರ್ಹಾನ್ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಎರಡನೇ ಶತಕವನ್ನು ಬಾರಿಸಿದರು. ಫರ್ಹಾನ್, 58 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 11 ಬೌಂಡರಿಗಳೊಂದಿಗೆ ಅಜೇಯ 100 ರನ್ ಗಳಿಸಿದರು.