Publish Date: Sat, 08 Sep 2018 (09:08 IST)
Updated Date: Sat, 08 Sep 2018 (09:09 IST)
ದಿ ಓವಲ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನ ಭೋಜನ ವಿರಾಮದ ನಂತರ ಟೀಂ ಇಂಡಿಯಾ ವೇಗಿಗಳು ಎದುರಾಳಿಗಳಿಗೆ ಪೆವಿಲಿಯನ್ ಹಾದಿ ತೋರಿಸುತ್ತಿದ್ದರೆ, ಇತ್ತ ಶಿಖರ್ ಧವನ್ ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುತ್ತಾ ಅಭಿಮಾನಿಗಳ ಜತೆ ಬಾಂಗ್ರಾ ನೃತ್ಯ ಮಾಡುತ್ತಿದ್ದರು.
ನಿನ್ನೆಯ ದಿನ ಭೋಜನ ವಿರಾಮದವರೆಗೂ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾದಿಸಿದ್ದ ಇಂಗ್ಲೆಂಡ್ ನಂತರ ಅಂತಿಮ ಟೆಸ್ಟ್ ಪಂದ್ಯವಾಡುತ್ತಿರುವ ಅಲೆಸ್ಟರ್ ಕುಕ್ ವಿಕೆಟ್ ಕಳೆದುಕೊಂಡಿತು. ಅವರು 77 ರನ್ ಗಳಿಸಿದರು. ಇದಾದ ಬಳಿಕ ಇಂಗ್ಲೆಂಡ್ ಇದ್ದಕ್ಕಿದ್ದಂತೆ ಕುಸಿತ ಕಂಡಿತು. ಮಧ್ಯಮ ಕ್ರಮಾಂಕದಲ್ಲಿ ಬಹುಬೇಗ ವಿಕೆಟ್ ಉದುರಿಸಿಕೊಂಡು ಇಂಗ್ಲೆಂಡ್ ಸಂಕಷ್ಟಕ್ಕೀಡಾಯಿತು. ಭಾರತದ ಪರ ಇಶಾಂತ್ ಶರ್ಮಾ 3 ವಿಕೆಟ್ ಕಬಳಿಸಿದರೆ ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾಗೆ ತಲಾ ಎರಡು ವಿಕೆಟ್ ಸಿಕ್ಕಿತು. ದಿನದಂತ್ಯಕ್ಕೆ ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತು.
ಒಂದೆಡೆ ವೇಗಿಗಳು ಪಿಚ್ ನಲ್ಲಿ ರುದ್ರ ನರ್ತನ ಮಾಡುತ್ತಿದ್ದರೆ, ಇತ್ತ ರಿಲ್ಯಾಕ್ಸ್ ಮೂಡ್ ನಲ್ಲಿ ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ಮೈದಾನದಲ್ಲಿಯೇ ತಮ್ಮ ಬಾಂಗ್ರಾ ನೃತ್ಯದ ಝಲಕ್ ತೋರಿಸಿದರು. ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಧವನ್ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಭಾರತೀಯ ಅಭಿಮಾನಿಗಳ ಸಂಘ ಭಾರತ್ ಆರ್ಮಿ ಮಾಡುತ್ತಿದ್ದ ಬಾಂಗ್ರಾ ನೃತ್ಯಕ್ಕೆ ಜತೆಯಾದರು. ಈ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.