ಉರಿ ಸೇನಾನೆಲೆಯ ಮೇಲೆ ನಡೆದ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ರಾಜತಾಂತ್ರಿಕ ಸಮರ ಕಾವು ಪಡೆದುಕೊಂಡಿದೆ. ದೇಶದ ಎಲ್ಲೆಡೆಗಳಿಂದ ಪಾಕ್ ವಿರುದ್ಧ ಇನ್ನಿಲ್ಲದ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮಧ್ಯೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕೂಡ ಪಾಕ್ ಜತೆ ಭಾರತ ತಂಡ ಕ್ರಿಕೆಟ್ ಆಡುವುದಿಲ್ಲ ಎಂದು ಖಡಕ್ ನಿರ್ಣಯವನ್ನು ಪ್ರಕಟಿಸಿದೆ.
ಪಾಕಿಸ್ತಾನ ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿದೆ ಎಂಬುದನ್ನು ನಾವು ಜಗಜ್ಜಾಹೀರುಗೊಳಿಸಬೇಕಿದೆ. ಪಾಕ್ ಜತೆ ಕ್ರಿಕೆಟ್ ಆಡುವ ಪ್ರಶ್ನೆಯೇ ಇಲ್ಲ ಎಂದು ಬಿಸಿಸಿಐ ಅಧ್ಯಕ್ಷ, ಲೋಕಸಭಾ ಸದಸ್ಯ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಅಪಾರ ಪ್ರಮಾಣದ ಶಸಸ್ತ್ರಧಾರಿ ನಾಲ್ವರು ಉಗ್ರರು ಕಳೆದ ಭಾನುವಾರ ಉರಿ ಸೇನಾ ನೆಲೆ ಮೇಲೆ ದಾಳಿ ಮಾಡಿ 18 ಸೈನಿಕರ ಸಾವಿಗೆ ಕಾರಣರಾಗಿದ್ದರು. ಕಳೆದ ಎರಡು ದಶಕಗಳಲ್ಲಿ ಉಗ್ರರು ಎಸಗಿರುವ ಅತ್ಯಂತ ಘೋರ ದಾಳಿ ಇದಾಗಿದೆ.
ಇದು ವಿಶ್ವಸಂಸ್ಥೆಯ 71ನೇ ಅಧಿವೇಶನದಲ್ಲೂ ಬಿಸಿ ಚರ್ಚೆಗೆ ಕಾರಣವಾಗಿದೆ. ಪ್ರದೇಶದಲ್ಲಿನ ಪ್ರಾದೇಶಿಕ ಅಸ್ಥಿರತೆಗಾಗಿ ಅಧಿವೇಶನದಲ್ಲಿ ಎರಡು ರಾಷ್ಟ್ರಗಳು ಪರಷ್ಪರ ದೋಷಾರೋಪಣೆ ಮಾಡುತ್ತಿವೆ.
ಪಾಕ್ ಮೇಲೆ ಯುದ್ಧ ಸಾರಬೇಕು ಎಂದು ದೇಶದಲ್ಲಿ ವ್ಯಾಪಕ ಒತ್ತಾಯ ಕೂಡ ಕೇಳಿ ಬರುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ