ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಶಮಿ ಇನ್ನೂ ತಮ್ಮ ನಿರ್ಧಾರ ಪ್ರಕಟಿಸಿಲ್ಲ.
ಮುಂಬರುವ ಲೋಕಸಭೆ ಚುನಾವಣೆಗೆ ಈಗಾಗಲೇ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ರೆಡಿ ಮಾಡಿಕೊಂಡಿದೆ. ಈ ಪಟ್ಟಿಯಲ್ಲಿ ಯಾರೆಲ್ಲಾ ಇರಲಿದ್ದಾರೆ ಎನ್ನುವುದು ಈಗ ಸಸ್ಪೆನ್ಸ್ ಆಗಿದೆ. ಆದರೆ ಪಶ್ಚಿಮ ಬಂಗಾಲದಿಂದ ಮೊಹಮ್ಮದ್ ಶಮಿಯನ್ನು ಕಣಕ್ಕಿಳಿಸಲು ಬಿಜೆಪಿ ಯೋಜನೆ ಹಾಕಿಕೊಂಡಿದೆಯಂತೆ.
ಪಶ್ಚಿಮ ಬಂಗಾಲದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಗೆ ಕಡಿವಾಣ ಹಾಕಲು ಬಿಜೆಪಿ ಶಮಿಯನ್ನು ಅಸ್ತ್ರವಾಗಿ ಬಳಸಲು ಮುಂದಾಗಿದೆ. ಇದಕ್ಕಾಗಿ ಶಮಿಗೆ ಲೋಕಸಭೆ ಟಿಕೆಟ್ ಆಫರ್ ನೀಡಿದೆ. ಆದರೆ ಇದುವರೆಗೆ ಶಮಿ ಈ ಆಫರ್ ನ್ನು ಸ್ವೀರಿಸಿಲ್ಲ ಜೊತೆಗೆ ತಿರಸ್ಕರಿಸಿಯೂ ಇಲ್ಲ!
ಕೆಲವು ಸಮಯದ ಮೊದಲು ಟೀಂ ಇಂಡಿಯಾ ವಿಶ್ವಕಪ್ ಫೈನಲ್ ಸೋತಾಗ ಪ್ರಧಾನಿ ಮೋದಿ ಡ್ರೆಸ್ಸಿಂಗ್ ರೂಂಗೆ ತೆರಳಿ ಆಟಗಾರರನ್ನು ಹುರಿದುಂಬಿಸಿದ್ದರು. ಅವರಲ್ಲಿ ವಿಶೇಷವಾಗಿ ಮೊಹಮ್ಮದ್ ಶಮಿಯ ಬೆನ್ನುತಟ್ಟಿದ್ದರು. ಯಾಕೆಂದರೆ ಕಳೆದ ವಿಶ್ವಕಪ್ ನಲ್ಲಿ ಶಮಿ ಅತೀ ಹೆಚ್ಚು ವಿಕೆಟ್ ಪಡೆದು ಹೀರೋ ಎನಿಸಿಕೊಂಡಿದ್ದರು. ಈ ಘಟನೆ ಬಳಿಕ ಮೊಹಮ್ಮದ್ ಶಮಿ ಬೇಸರದಲ್ಲಿದ್ದ ಕ್ರಿಕೆಟಿಗರಿಗೆ ಸ್ಪೂರ್ತಿ ತುಂಬಿದ್ದಕ್ಕೆ ಪ್ರಧಾನಿ ಮೋದಿಗೆ ಧನ್ಯವಾದ ಸಲ್ಲಿಸಿದ್ದರು.