ಸಿಡ್ನಿ: ಮಯಾಂಕ್ ಅಗರ್ವಾಲ್-ಕೆಎಲ್ ರಾಹುಲ್ ಎಂಥಾ ಸ್ನೇಹಿತರು ಎಂಬುದು ಕರ್ನಾಟಕ ಕ್ರಿಕೆಟ್ ಅಭಿಮಾನಿಗಳಿಗೆ ಚೆನ್ನಾಗಿ ಗೊತ್ತು. ಇವರಿಬ್ಬರು ಮೈದಾನದಲ್ಲಿ ಮಾತ್ರವಲ್ಲ, ಹೊರಗೆಯೂ ಬೆಸ್ಟ್ ಫ್ರೆಂಡ್ಸ್. ಈ ಬೆಸ್ಟ್ ಫ್ರೆಂಡ್ಸ್ ಟೀಂ ಇಂಡಿಯಾ ಪರ ಕರ್ನಾಟಕ ಮೊದಲ ಜೋಡಿಯಾಗಿ ಆರಂಭಿಕರಾಗಿ ಕಣಕ್ಕಿಳಿದಿದ್ದು ಭಾರತ-ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ವಿಶೇಷ.
ಮಯಾಂಕ್ ಪ್ರೇಮಕ್ಕೆ ಬಿದ್ದಾಗಲೂ ಅವರಿಗೆ ಪ್ರಪೋಸ್ ಮಾಡಲು, ಮದುವೆ ಮಾಡಿಕೊಳ್ಳಲು ಸಹಾಯ ಮಾಡಿದ್ದು ಇದೇ ಕೆಎಲ್ ರಾಹುಲ್. ವಿಪರ್ಯಾಸವೆಂದರೆ ಅದೇ ರಾಹುಲ್ ವಿಫಲರಾದಾಗ ಮಯಾಂಕ್ ಗೆ ಬಹುದಿನಗಳಿಂದ ಕಾಯುತ್ತಿದ್ದ ಟೀಂ ಇಂಡಿಯಾ ಕ್ಯಾಪ್ ದೊರಕಿತ್ತು.
ಆದರೆ ರಾಹುಲ್ ಅದೃಷ್ಟವೆಂಬಂತೆ ರೋಹಿತ್ ಅನುಪಸ್ಥಿತಿಯಲ್ಲಿ ಗೆಳೆಯನ ಜತೆಗೇ ಆರಂಭಿಕನಾಗುವ ಅವಕಾಶ ಎದುರಾಗಿತ್ತು. ವಿಶೇಷವೆಂದರೆ ರಾಹುಲ್ ಕೂಡಾ ಆಸ್ಟ್ರೇಲಿಯಾದಲ್ಲಿಯೇ ಮೊದಲ ಟೆಸ್ಟ್ ಆಡಿದ್ದರು. ಆಗ ಅವರೂ ಅರ್ಧಶತಕ ಸಿಡಿಸಿ ಗಮನಸೆಳೆದಿದ್ದರು. ಈಗ ಮಯಾಂಕ್ ಕೂಡಾ ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯದ ಅವಕಾಶ ಪಡೆದು ಅದನ್ನು ಸರಿಯಾಗಿಯೇ ಬಳಸಿಕೊಂಡಿದ್ದಾರೆ.
ಇಷ್ಟು ದಿನ ಕಳಪೆ ಫಾರ್ಮ್ ನಲ್ಲಿದ್ದ ರಾಹುಲ್ ಗೆ ಇದು ಕೊನೆಯ ಅವಕಾಶವಾಗಿತ್ತು. ಗೆಳೆಯ ಜತೆಗಿರುವ ಉತ್ಸಾಹದಿಂದಾದರೂ ರಾಹುಲ್ ಫಾರ್ಮ್ ಗೆ ಮರಳಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಅದನ್ನು ರಾಹುಲ್ ಬಳಸಲಿಲ್ಲ ಎನ್ನುವುದು ವ್ಯಂಗ್ಯ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ