ಮುಂಬೈ: ಕನ್ನಡಿಗ, ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಕ್ರಿಕೆಟ್ ಪರಿಕರಗಳನ್ನು ಹರಾಜಿಗಿಟ್ಟು ಹಣ ಸಂಗ್ರಹಿಸಿ ಅದರಿಂದ ಬಡ ಮಕ್ಕಳಿಗೆ ನೆರವಾಗಲು ಮುಂದಾಗಿದ್ದಾರೆ. ಅವರು ಹರಾಜಿಗಿಟ್ಟ ವಸ್ತುಗಳಲ್ಲಿ ಬಿಕರಿಯಾದ ದುಬಾರಿ ವಸ್ತು ಯಾವುದು ಗೊತ್ತಾ?
ಕೆಎಲ್ ರಾಹುಲ್ ಪತ್ನಿ ಅಥಿಯಾ ಜೊತೆಗೂಡಿ ತಮ್ಮ ಸಂಗ್ರಹದಲ್ಲಿರುವ ಕ್ರಿಕೆಟ್ ಪರಿಕರಗಳನ್ನು ಹರಾಜಿಗಿಟ್ಟಿದ್ದಾರೆ. ಇದರಿಂದ ಅವರು 1.96 ಕೋಟಿ ರೂ. ಸಂಗ್ರಹ ಮಾಡಿದ್ದಾರೆ. ಇದನ್ನು ಬಡ ಮಕ್ಕಳ ನೆರವಿಗೆ ಬಳಸಿಕೊಳ್ಳುವುದಾಗಿ ಕೆಎಲ್ ರಾಹುಲ್ ಹೇಳಿದ್ದಾರೆ.
ಮೊನ್ನೆಯಷ್ಟೇ ಕೆಎಲ್ ರಾಹುಲ್ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ನಾನೊಂದು ಘೋಷಣೆ ಮಾಡಬೇಕಿದೆ ಎಂದು ಎಲ್ಲರನ್ನೂ ಕುತೂಹಲಕ್ಕೆ ದೂಡಿದ್ದರು. ಅವರ ಈ ಪೋಸ್ಟ್ ನೋಡಿದ ಕೆಲವರು ಅವರು ನಿವೃತ್ತಿಯಾಗುತ್ತಿದ್ದಾರೆಯೇ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಇದೆಲ್ಲಾ ಅನುಮಾನವನ್ನು ಅವರು ತೊಡೆದುಹಾಕಿದ್ದು ಒಳ್ಳೆಯ ಉದ್ದೇಶಕ್ಕಾಗಿ ತಾವು ಮಾಡಿದ ಹರಾಜಿನ ಬಗ್ಗೆ ತಿಳಿಸಲು ಈ ರೀತಿ ಪೋಸ್ಟ್ ಮಾಡಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.
ರಾಹುಲ್ ಹರಾಜಿಗಿಟ್ಟ ಕ್ರಿಕೆಟ್ ಪರಿಕರಗಳಲ್ಲಿ ವಿರಾಟ್ ಕೊಹ್ಲಿ ಜೆರ್ಸಿ, ಗ್ಲೌಸ್, ರೋಹಿತ್ ಶರ್ಮಾ, ಧೋನಿ ಬ್ಯಾಟ್, ದ್ರಾವಿಡ್ ಬ್ಯಾಟ್ ಮುಂತಾದವು ಸೇರಿದ್ದವು. ಈ ಪೈಕಿ ಅತೀ ಹೆಚ್ಚು ಮೊತ್ತಕ್ಕೆ ಬಿಕರಿಯಾಗಿದ್ದ ಕೊಹ್ಲಿಯ ಜೆರ್ಸಿ. ಇದು 40 ಲಕ್ಷ ರೂ.ಗಳಿಗೆ ಬಿಕರಿಯಾಗಿದೆ. ಇನ್ನು ಕೊಹ್ಲಿ ಗ್ಲೌಸ್ 28 ಲಕ್ಷ ರೂ., ರೋಹಿತ್ ಬ್ಯಾಟ್ 24 ಲಕ್ಷ ರೂ., ಧೋನಿ ಬ್ಯಾಟ್ 13 ಲಕ್ಷ, ರಾಹುಲ್ ದ್ರಾವಿಡ್ ಬ್ಯಾಟ್ 11 ಲಕ್ಷ ರೂ.ಗೆ ಬಿಕರಿಯಾಗಿದೆ ಎಂದು ತಿಳಿದುಬಂದಿದೆ.