ಬೆಂಗಳೂರು: ಕರ್ನಾಟಕದ ಯುವ ಕ್ರಿಕೆಟಿಗ ಕೆ ಹೊಯ್ಸಳ ಹೃದಯಸ್ತಂಬನಕ್ಕೊಳಗಾಗಿ ಹಠಾತ್ ನಿಧನರಾಗಿದ್ದು ಎಲ್ಲರನ್ನೂ ದಿಗ್ಬ್ರಮೆಗೊಳಿಸಿದೆ. ಅವರ ನಿಧನಕ್ಕೆ ಅಭಿಮಾನಿಗಳು, ಸ್ನೇಹಿತರು ಕಂಬನಿ ಮಿಡಿದಿದ್ದಾರೆ.
ಎರಡು ವರ್ಷಗಳ ಮೊದಲು ಪುನೀತ್ ರಾಜ್ ಕುಮಾರ್ ಕೂಡಾ ಹೃದಯಸ್ತಂಬನಕ್ಕೊಳಗಾಗಿ ಸಾವನ್ನಪ್ಪಿದ್ದರು. ಆ ಬಳಿಕ ನಾವು ಅಂತಹದ್ದೇ ಅನೇಕ ಘಟನೆಗಳನ್ನು ಕೇಳುತ್ತಿದ್ದೇವೆ. ಇದೀಗ ಹೊಯ್ಸಳಗೂ ಅದೇ ರೀತಿ ಸಾವಾಗಿದೆ. ಎಲ್ಲರೊಂದಿಗೆ ಚೆನ್ನಾಗಿಯೇ ಇದ್ದ ಹೊಯ್ಸಳ ದಿಡೀರ್ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಬೆಂಗಳೂರಿನ ಆರ್ ಎಸ್ ಐ ಮೈದಾನದಲ್ಲಿ ನಡೆಯುತ್ತಿರುವ ತಮಿಳುನಾಡು ವಿರುದ್ಧದ ಏಜಿಸ್ ಸೌತ್ ಝೋನ್ ಪಂದ್ಯಾವಳಿಯಲ್ಲಿ ಹೊಯ್ಸಳ ಭಾಗಿಯಾಗಿದ್ದರು. ಮಧ್ಯಾಹ್ನ ಭೋಜನ ವಿರಾಮದ ವೇಳೆ ತಂಡದ ಆಟಗಾರರ ಜೊತೆಗಿದ್ದಾಗ ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದಾರೆ. ತಕ್ಷಣವೇ ಅಲ್ಲಿದ್ದ ಫಿಸಿಯೋಗಳು ಹೊಯ್ಸಳಗೆ ಪ್ರಥಮ ಚಿಕಿತ್ಸೆ ನೀಡಿದರು. ಬಳಿಕ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರ ಪ್ರಾಣ ಪಕ್ಷಿಯೇ ಹಾರಿಹೋಗಿತ್ತು.
ಸ್ಪುರದ್ರೂಪಿ, ಇನ್ನೂ 35 ವರ್ಷದ ಹೊಯ್ಸಳ ಸಾವು ಎಲ್ಲರನ್ನೂ ಮತ್ತೊಮ್ಮೆ ಶಾಕ್ ಗೊಳಗಾಗಿಸಿದೆ. ಬದುಕಿನಲ್ಲಿ ಇನ್ನೂ ಸಾಕಷ್ಟು ನೋಡುವುದಿತ್ತು. ಆಗಲೇ ಇಹಲೋಕದ ಪಯಣ ಮುಗಿಸಿದ್ದು ದುರದೃಷ್ಟಕರ.