Publish Date: Tue, 07 Apr 2026 (09:18 IST)
Updated Date: Tue, 07 Apr 2026 (09:29 IST)
ಚೆನ್ನೈ: 2026 ಟಿ20 ವಿಶ್ವಕಪ್ ನಲ್ಲಿ ಅದ್ಭುತ ಫಾರ್ಮ್ ಮೂಲಕ ಹೀರೋ ಆಗಿದ್ದ ಸಂಜು ಸ್ಯಾಮ್ಸನ್ ಈ ಬಾರಿ ಐಪಿಎಲ್ ನಲ್ಲಿ ಯಾಕೋ ಡಲ್ ಹೊಡೆಯುತ್ತಿದ್ದಾರೆ.
ಕಳೆದ ಆರೇಳು ವರ್ಷಗಳಿಂದ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡಿದ್ದ ಸಂಜು ಸ್ಯಾಮ್ಸನ್ ಈ ಬಾರಿ ಚೆನ್ನೈಗೆ ಬಂದಾಗ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯಿತ್ತು. ಅವರಿಗೆ ಇರುವ ಜನ ಬೆಂಬಲ ನೋಡಿದರೆ ಅವರು ಧೋನಿ ಸ್ಥಾನ ತುಂಬಬಲ್ಲರು ಎಂದೇ ಎಲ್ಲರ ಲೆಕ್ಕಾಚಾರವಾಗಿತ್ತು.
ಆದರೆ ಚೆನ್ನೈಗೆ ಬಂದ ಮೇಲೆ ಯಾಕೋ ಸಂಜು ಮಂಕಾಗಿದ್ದಾರೆ. ತಮ್ಮ ಮೆಚ್ಚಿನ ಆರಂಭಿಕ ಸ್ಥಾನ ಸಿಕ್ಕರೂ ರನ್ ಗಳಿಸಲು ವಿಫಲರಾಗುತ್ತಿದ್ದಾರೆ. ಕಳೆದ ಮೂರೂ ಪಂದ್ಯಗಳಲ್ಲಿ ಒಮ್ಮೆಯೂ ಅವರು ಎರಡಂಕಿ ದಾಟುವಲ್ಲಿ ವಿಫಲರಾಗಿದ್ದಾರೆ.
ಮೊದಲ ಪಂದ್ಯದಲ್ಲಿ 6, ಎರಡನೇ ಪಂದ್ಯದಲ್ಲಿ 7 ಮತ್ತು ಮೂರನೇ ಪಂದ್ಯದಲ್ಲಿ 9 ರನ್ ಗಳಿಸಿ ಔಟಾಗಿದ್ದಾರೆ. ಈ ಮೂರೂ ಪಂದ್ಯಗಳಲ್ಲೂ ಅವರು ಎಂದಿನ ಸಿಡಿಲಬ್ಬರದ ಆರಂಭದ ಸೂಚನೆಯನ್ನೂ ನೀಡಿಲ್ಲ. ಇದು ಚೆನ್ನೈಗೆ ದೊಡ್ಡ ಹೊಡೆತ ನೀಡಿದೆ. ಇದರಿಂದ ಸಿಎಸ್ ಕೆ ಅಭಿಮಾನಿಗಳೂ ಆಕ್ರೋಶಗೊಂಡಿದ್ದಾರೆ. ಆದರೆ ಸಂಜುಗೆ ಈ ಸೆಟ್ ಬ್ಯಾಕ್ ಗಳೆಲ್ಲಾ ಹೊಸತಲ್ಲ. ಈ ಹಿಂದೆ ನ್ಯೂಜಿಲೆಂಡ್ ವಿರುದ್ಧ ಸತತ ವೈಫಲ್ಯ ಅನುಭವಿಸಿದ್ದ ಅವರು ವಿಶ್ವಕಪ್ ವೇಳೆಗೆ ಫೀನಿಕ್ಸ್ ನಂತೆ ಎದ್ದು ಬಂದಿದ್ದರು. ಈ ಬಾರಿಯೂ ವೈಫಲ್ಯಗಳನ್ನು ಮೆಟ್ಟಿ ನಿಂತು ಸಿಎಸ್ ಕೆ ಅಭಿಮಾನಿಗಳ ನಿರೀಕ್ಷೆ ನಿಜ ಮಾಡಬಹುದು ಎಂಬ ಭರವಸೆಯಿದೆ.
Krishnaveni K
Publish Date: Tue, 07 Apr 2026 (09:18 IST)
Updated Date: Tue, 07 Apr 2026 (09:29 IST)