Publish Date: Sat, 28 Feb 2026 (14:16 IST)
Updated Date: Sat, 28 Feb 2026 (14:18 IST)
ಬೆಂಗಳೂರು: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ 19ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. 2026ರ ಋತುವಿನ ಟೂರ್ನಿಯ ಉದ್ಘಾಟನೆ, ಫೈನಲ್‌ನ ಮಾಹಿತಿ ಇಲ್ಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮಾರ್ಚ್ 26ರಂದು ಆರಂಭವಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಎರಡು ದಿನ ತಡವಾಗಿ ಆರಂಭವಾಗಲಿದೆ ಎನ್ನಲಾಗಿದೆ. ಮಾರ್ಚ್ 28 ಶನಿವಾರ ಟೂರ್ನಿ ಆರಂಭವಾಗಲಿದ್ದು, ಮೇ 31ರಂದು ಫೈನಲ್ ಪಂದ್ಯ ನಡೆಯಲಿದೆ ಎನ್ನುತ್ತವೆ ಬಿಸಿಸಿಐ ಮೂಲಗಳು.
ಆಂತರಿಕ ಕಾರಣಗಳಿಂದಾಗಿ ಎರಡು ದಿನ ವಿಳಂಬವಾಗಿ ಅಂದರೆ ಮಾರ್ಚ್ 28ಕ್ಕೆ ಉದ್ಘಾಟನಾ ಪಂದ್ಯವನ್ನು ನಿಗದಿಪಡಿಸಲಾಗಿದೆ. ಮುಂದಿನ ವಾರ ನಡೆಯಲಿರುವ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಅಧಿಕೃತ ವೇಳಾಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ.
ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಅಸ್ಸಾಂ ರಾಜ್ಯಗಳಲ್ಲಿನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ವೇಳಾಪಟ್ಟಿ ಪ್ರಕಟಣೆಯಲ್ಲಿ ಸ್ವಲ್ಪ ವಿಳಂಬವಾಗಿದೆ. ಕೋಲ್ಕತ್ತಾ , ಚೆನ್ನೈ ಮತ್ತು ಗುವಾಹಟಿ ನಗರಗಳಲ್ಲಿ ಪಂದ್ಯಗಳನ್ನು ಆಯೋಜಿಸಲು ಭದ್ರತಾ ದೃಷ್ಟಿಯಿಂದ ಚುನಾವಣಾ ಆಯೋಗದ ದಿನಾಂಕಗಳಿಗಾಗಿ ಬಿಸಿಸಿಐ ಕಾಯುತ್ತಿದೆ.
ಕಳೆದ ಬಾರಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಉದ್ಘಾಟನಾ ಪಂದ್ಯದಲ್ಲಿ ಕಣಕ್ಕಿಳಿಯುವುದು ಖಚಿತ. ಆದರೆ, ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತದೆಯೇ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಒಂದು ವೇಳೆ ಬೆಂಗಳೂರಿನಲ್ಲಿ ಪಂದ್ಯ ನಡೆಯದಿದ್ದರೆ ಆರ್‌ಸಿಬಿ ತನ್ನ ತವರಿನ ಪಂದ್ಯಗಳನ್ನು ನವಿ ಮುಂಬೈ, ರಾಯ್‌ಪುರ ಮತ್ತು ಪುಣೆಯಲ್ಲಿ ಆಡುವ ಸಾಧ್ಯತೆಯಿದೆ.