ಮುಂಬೈ: ಸಹೋದರ ಕೃನಾಲ್ ಪಾಂಡ್ಯರಿಂದಾಗಿಯೇ ಹಾರ್ದಿಕ್ ಪಾಂಡ್ಯ ಸೋಲುವಂತಾಯಿತು. ಹಾರ್ದಿಕ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವನ್ನು ಆರ್ ಸಿಬಿ 12 ರನ್ ಗಳಿಂದ ಸೋಲಿಸಿತು.
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಜಿತೇಶ್ ಶರ್ಮಾ ಅಬ್ಬರದ ಬ್ಯಾಟಿಂಗ್ ನಿಂದಾಗಿ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 221 ರನ್ ಗಳ ಬೃಹತ್ ಗುರಿ ನೀಡಿತು. ಇದನ್ನು ಬೆನ್ನತ್ತಿದ ಮುಂಬೈ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಲಷ್ಟೇ ಶಕ್ತವಾಯಿತು. ಒಂದು ಹಂತದಲ್ಲಿ ತಿಲಕ್ ವರ್ಮ ಮತ್ತು ಹಾರ್ದಿಕ್ ಪಾಂಡ್ಯ ಗೆಲುವು ತಮ್ಮದಾಗಿಸುತ್ತಾರೇನೋ ಎಂಬ ಭೀತಿ ಆರ್ ಸಿಬಿಗಿತ್ತು. ಆದರೆ ಇದೇ ಹಂತದಲ್ಲಿ ಭುವನೇಶ್ವರ್ ಕುಮಾರ್ ಮತ್ತು ಹೇಝಲ್ ವುಡ್ ಈ ಇಬ್ಬರ ವಿಕೆಟ್ ಕಬಳಿಸಿದರು.
ಹಾಗಿದ್ದರೂ ಮುಂಬೈಗೆ ಗೆಲ್ಲುವ ಅವಕಾಶವಿತ್ತು. ಆದರೆ ಮುಂಬೈ ತಂಡಕ್ಕೆ ಕಂಟಕವಾಗಿದ್ದು ನಾಯಕ ಹಾರ್ದಿಕ್ ಸಹೋದರ, ಆರ್ ಸಿಬಿ ಆಲ್ ರೌಂಡರ್ ಕೃನಾಲ್ ಪಾಂಡ್ಯ. ಕೊನೆಯ ಮೂರೂ ವಿಕೆಟ್ ಗಳನ್ನು ಕೃನಾಲ್ ಕಬಳಿಸಿದರು. ಒಂದು ಹಂತದಲ್ಲಿ 6 ಎಸೆತಗಳಲ್ಲಿ ಮುಂಬೈ 19 ರನ್ ಗಳಿಸಬೇಕಾದ ಒತ್ತಡದಲ್ಲಿದ್ದಾಗ ಕೃನಾಲ್ ವಿಕೆಟ್ ಕಬಳಿಸುವ ಮೂಲಕ ಗೆಲುವು ಆರ್ ಸಿಬಿ ಕೈ ತಪ್ಪದಂತೆ ನೋಡಿಕೊಂಡರು. ಕೊನೆಗೂ ಸಹೋದರನಿಂದಲೇ ಹಾರ್ದಿಕ್ ಪಡೆ ಸೋಲುವಂತಾಯಿತು.
ವಿರಾಟ್ ಕೊಹ್ಲಿ ದಾಖಲೆ
ಈ ಪಂದ್ಯದಲ್ಲಿ 42 ಎಸೆತಗಳಿಂದ 67 ರನ್ ಸಿಡಿಸಿದ ಕೊಹ್ಲಿ ದಾಖಲೆಯೊಂದನ್ನು ಬರೆದರು. ಟಿ20 ಕ್ರಿಕೆಟ್ ನಲ್ಲಿ 13 ಸಾವಿರ ರನ್ ಪೂರೈಸಿದ ವಿಶ್ವದ ಏಕೈಕ ಕ್ರಿಕೆಟಿಗನೆಂಬ ದಾಖಲೆ ಮಾಡಿದರು. ಅಲ್ಲದೆ, ಆರ್ ಸಿಬಿ 10 ವರ್ಷಗಳ ಬಳಿಕ ವಾಂಖೆಡೆ ಮೈದಾನದಲ್ಲಿ ಗೆದ್ದ ಸಾಧನೆ ಮಾಡಿತು.