Publish Date: Sat, 27 Jan 2024 (15:24 IST)
Updated Date: Sat, 27 Jan 2024 (15:30 IST)
ಹೈದರಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗಳಿಸಿದ್ದ ಮೊದಲ ಇನಿಂಗ್ಸ್ ಮುನ್ನಡೆಯನ್ನು ದಾಟಿ ಇಂಗ್ಲೆಂಡ್ ಬ್ಯಾಟಿಂಗ್ ಮಾಡುತ್ತಿದೆ.
ಮೊದಲ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ 246 ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಟೀಂ ಇಂಡಿಯಾ 436 ರನ್ ಗಳಿಸಿ 190 ರನ್ ಗಳ ಬೃಹತ್ ಮುನ್ನಡೆ ಪಡೆಯಿತು. ಆದರೆ ಮೊದಲ ಇನಿಂಗ್ಸ್ ನಂತೆ ಇಂಗ್ಲೆಂಡ್ ಎರಡನೇ ಇನಿಂಗ್ಸ್ ನಲ್ಲಿ ಹೆಚ್ಚು ತಪ್ಪು ಮಾಡಲಿಲ್ಲ.
ಆರಂಭಿಕರು ಉತ್ತಮ ಆರಂಭ ನೀಡಿದರು. ಜಾಕ್ ಕ್ರಾವ್ಲೇ 31, ಬೆನ್ ಡಕೆಟ್ 47 ರನ್ ಗಳಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ಒಲಿ ಪಾಪ್ 92 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದರಿಂದಾಗಿ ಇಂಗ್ಲೆಂಡ್ ಇತ್ತೀಚೆಗಿನ ವರದಿ ಬಂದಾಗ 5 ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿದೆ.
ಆದರೆ ಅನುಭವಿ ಜೋ ರೂಟ್ ಬೌಲಿಂಗ್ ನಲ್ಲಿ ಮಿಂಚಿದ್ದು ಬಿಟ್ಟರೆ ಬ್ಯಾಟಿಂಗ್ ನಲ್ಲಿ ಕಮಾಲ್ ಮಾಡಲಿಲ್ಲ. ಕೇವಲ 2 ರನ್ ಗಳಿಗೆ ಔಟಾಗಿ ನಿರಾಸೆ ಮೂಡಿಸಿದರು. ಕಳೆದ ಇನಿಂಗ್ಸ್ ನಲ್ಲಿ ಅರ್ಧಶತಕ ಸಿಡಿಸಿದ್ದ ಜಾನಿ ಬೇರ್ ಸ್ಟೋ ಈ ಇನಿಂಗ್ಸ್ ನಲ್ಲಿ 10 ರನ್ ಗಳಿಸಲಷ್ಟೇ ಶಕ್ತರಾದರು. ನಾಯಕ ಬೆನ್ ಸ್ಟೋಕ್ಸ್ 6 ರನ್ ಗಳಿಸಿ ಔಟಾದರು.
ಭಾರತದ ಪರ ಸ್ಪಿನ್ನರ್ ಗಳಿಗೆ ಸಾಥ್ ನೀಡುತ್ತಿರುವ ಜಸ್ಪ್ರೀತ್ ಬುಮ್ರಾ 2 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ರವಿಚಂದ್ರನ್ ಅಶ್ವಿನ್ 2, ರವೀಂದ್ರ ಜಡೇಜಾ 1 ವಿಕೆಟ್ ಕಬಳಿಸಿದರು. ಇದೀಗ ಇಂಗ್ಲೆಂಡ್ 36 ರನ್ ಗಳ ಮುನ್ನಡೆ ಪಡೆದಿದೆ.