ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕುರ್ ಸೆ. 15ರೊಳಗೆ ಟೀಂ ಇಂಡಿಯಾಗೆ ಬೆಂಬಲ ಸಿಬ್ಬಂದಿಯನ್ನು ಆಯ್ಕೆ ಮಾಡಲಾಗುತ್ತದೆಂದು ದೃಢಪಡಿಸಿದ್ದಾರೆ. ತಂಡವು ವೆಸ್ಟ್ ಇಂಡೀಸ್ ಪ್ರವಾಸದಿಂದ ಮರಳಿದ ಬಳಿಕ ಹೆಡ್ ಕೋಚ್ ಅನಿಲ್ ಕುಂಬ್ಳೆ ಮತ್ತು ತಂಡದ ಇತರೆ ಸದಸ್ಯರ ಜತೆ ಸಭೆ ನಡೆಸಿ ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಕೋಚ್ ಹಾಗೂ ಇತರೆ ಬೆಂಬಲ ಸಿಬ್ಬಂದಿಯನ್ನು ನೇಮಕ ಮಾಡಲಾಗುತ್ತದೆ ಎಂದು ಹೇಳಿದರು.
ಇಷಾ ಯೋಗ ಕೇಂದ್ರದಲ್ಲಿ 2 ದಿನಗಳ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಠಾಕುರ್ ಕೊಯಮತ್ತೂರಿನಲ್ಲಿದ್ದರು. ಕುಂಬ್ಳೆ ಅವರನ್ನು ಒಂದು ವರ್ಷಕ್ಕೆ ಹೆಡ್ ಕೋಚ್ ಆಗಿ ಆಯ್ಕೆ ಮಾಡಿದ ಕುರಿತು ಹೇಳುತ್ತಾ ಅವರ ಸಾಧನೆಯ ಆಧಾರದ ಮೇಲೆ ಗುತ್ತಿಗೆ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಈ ವರ್ಷದ ಕೊನೆಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಯಾವುದೇ ಹಗಲು ರಾತ್ರಿ ಟೆಸ್ಟ್ ಪಂದ್ಯ ನಡೆಯುವುದಿಲ್ಲ ಎಂದು ಠಾಕುರ್ ಖಚಿತಪಡಿಸಿದರು. ನ್ಯೂಜಿಲೆಂಡ್ ಪ್ರವಾಸದಲ್ಲಿ ಬರೀ ದಿನದ ಪಂದ್ಯಗಳನ್ನು ಆಡಿಸಲಾಗುತ್ತದೆ. ದುಲೀಪ್ ಟ್ರೋಫಿಗೆ ಮಾತ್ರ ನಸುಗೆಂಪು ಬಣ್ಣದ ಚೆಂಡುಗಳನ್ನು ಬಳಸಲಾಗುತ್ತಿದ್ದು ಅದು ಹಗಲು ರಾತ್ರಿ ಪಂದ್ಯವಾಗಲಿದೆ ಎಂದು ಠಾಕುರ್ ಹೇಳಿದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.