ಭಾರತದ ದುತಿ ಚಾಂದ್ ಶ್ರಮಪಟ್ಟು ಅಭ್ಯಾಸ ಮಾಡುತ್ತಿದ್ದು, 2016ರ ರಿಯೊ ಒಲಿಂಪಿಕ್ಸ್‌ನ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕದ ಮೇಲೆ ಕಣ್ಣಿರಿಸಿದ್ದಾರೆ. ದುತಿ ರಾಷ್ಟ್ರೀಯ ದಾಖಲೆಯೊಂದಿಗೆ ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಹಳಿಸಿದ್ದರು. ಒಡಿಶಾದ 20 ವರ್ಷದ ಯುವತಿಗೆ ಯಾವ ಅಥ್ಲೀಟ್ ಕೂಡ ಇದುವರೆಗೆ ಮಾಡಿರದ ಸಾಹಸ ಮಾಡಬೇಕೆಂಬ ಹೆಬ್ಬಯಕೆ. ಜಗತ್ತಿನಲ್ಲೇ ಅತ್ಯಂತ ಶ್ರೇಷ್ಟ ಪ್ರದರ್ಶನ ನೀಡುವ ಮೂಲಕ ಚಿನ್ನದ ಪದಕ ಗೆಲ್ಲುವುದು ಅವರ ಹೆಗ್ಗುರಿಯಾಗಿದೆ.
ನಾನು ಜಗತ್ತಿನ ಶ್ರೇಷ್ಟ ಒಟಗಾರರ ಜತೆ ಸ್ಪರ್ಧಿಸಲಿರುವ ಹಿನ್ನೆಲೆಯಲ್ಲಿ ಕಠಿಣ ತರಬೇತಿ ಪಡೆಯುತ್ತಿದ್ದು, ನನ್ನ ಪ್ರದರ್ಶನ ಸುಧಾರಣೆಗೆ ಎಲ್ಲಾ ಸಮಯವನ್ನು ಮುಡುಪಾಗಿಟ್ಟು ಚಿನ್ನ ಗೆಲ್ಲುವ ಗುರಿ ಹೊಂದಿದ್ದೇನೆ ಎಂದು ದುತಿ ಸಂದರ್ಶನದಲ್ಲಿ ತಿಳಿಸಿದರು.
ಆದರೆ ಸರ್ಕಾರದಿಂದ ಸಾಕಷ್ಟು ಪ್ರೋತ್ಸಾಹ ಸಿಗುತ್ತಿಲ್ಲ ಎಂದು ದುತಿ ಅಸಮಾಧಾನ ವ್ಯಕ್ತಪಡಿಸಿದರು. ನಾನು ಒಡಿಶಾ ಮುಖ್ಯಮಂತ್ರಿ ಶುಭಾಶಯ ಮತ್ತು ಆಶೀರ್ವಾದದಿಂದ ಚಿನ್ನದ ಪದಕವನ್ನು ಖಂಡಿತವಾಗಿ ಗೆಲ್ಲಲು ಯತ್ನಿಸುತ್ತೇನೆ. ಆದರೆ ನಾನು ಸ್ಪೈಕ್ ಶೂನ ಹೊಸ ಜೊತೆಯನ್ನು ಈಗ ಪಡೆಯುವುದು ಮುಖ್ಯವಾಗಿದೆ ಎಂದು ಹೇಳಿದರು.
ರನ್ನಿಂಗ್ ಶೂಗಳು ದುಬಾರಿಯಾಗಿದ್ದು, ನನಗೆ ಒಂದು ಸೆಟ್ ಟ್ರಾಕ್‌ಸೂಟ್ ಮತ್ತು ರನ್ನಿಂಗ್ ಶೂಗಳ ಜೊತೆಯನ್ನು ಒದಗಿಸಿದರೆ ನಾನು ಶ್ರೇಷ್ಟ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ ಎಂದು ದುತಿ ಹೇಳಿದರು. ನಾನು ಇಷ್ಟೊಂದು ಸಾಧನೆ ಮಾಡಿದ್ದರೂ ಸರ್ಕಾರದಿಂದ ಭಿಕ್ಷೆ ಬೇಡಬೇಕಾದ ಪರಿಸ್ಥಿತಿ ಬಂದಿದೆ. ಸರ್ಕಾರವೇ ಇವೆಲ್ಲಾ ಒದಗಿಸಬೇಕಿತ್ತು ಎಂದು ದುತಿ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ