ಪುಣೆ: ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ್ದಾಯ್ತು. ಇದೀಗ ಏಕದಿನ ಸರಣಿಯಲ್ಲಿ ಕಾದಾಡಲು ಭಾರತ-ಇಂಗ್ಲೆಂಡ್ ಸಜ್ಜಾಗಿವೆ. ಅದಕ್ಕಾಗಿ ವೇದಿಕೆಯೂ ಸಿದ್ಧಗೊಂಡಿದೆ.
ಎಲ್ಲರ ಚಿತ್ರ ಇದೀಗ ವಿರಾಟ್ ಕೊಹ್ಲಿಯತ್ತ ನೆಟ್ಟಿದೆ. ಇದು ಅವರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ಮೊದಲ ಪಂದ್ಯ. ಅಲ್ಲದೆ ಇದುವರೆಗೆ ನಾಯಕತ್ವ ವಹಿಸಿದ್ದ ಧೋನಿ ಈ ಪಂದ್ಯದಲ್ಲಿ ಸಾಮಾನ್ಯ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ. ಪಂದ್ಯಕ್ಕೆ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಈಗಾಗಲೇ ಕೊಹ್ಲಿ ಪಂದ್ಯದ ನಡುವೆ ಧೋನಿ ಸಲಹೆ ಪಡೆಯುವುದಾಗಿ ಹೇಳಿದ್ದಾರೆ.
ಹಿರಿಯ ಆಟಗಾರರಾದ ಯುವರಾಜ್ ಸಿಂಗ್, ಆಶಿಶ್ ನೆಹ್ರಾ ಹಲವು ದಿನಗಳ ನಂತರ ತಂಡಕ್ಕೆ ಮರಳಿದ್ದು, ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಈಗಾಗಲೇ ಅಜಿಂಕ್ಯಾ ರೆಹಾನೆಯನ್ನು ಆರಂಭಿಕರಾಗಿ ಕಣಕ್ಕಿಳಿಸುವ ಬಗ್ಗೆ ಕೋಚ್ ಅನಿಲ್ ಕುಂಬ್ಳೆ ಸೂಚನೆ ನೀಡಿದ್ದಾರೆ.
ಅತ್ತ ಇಂಗ್ಲೆಂಡ್ ತಂಡವೂ, ಹೊಸ ನಾಯಕ, ಹೊಸ ತಂಡದೊಂದಿಗೆ ಹಳೆಯ ಸೋಲಿನ ಕಹಿಯನ್ನು ಮರೆತು ಹೊಸ ಗೆಲುವಿನ ಉತ್ಸಾಹದೊಂದಿಗೆ ತವರಿನಿಂದ ಭಾರತಕ್ಕೆ ವಾಪಸಾಗಿದೆ. ನಾಯಕನೇ ಅವರ ಪ್ರಮುಖ ಶಕ್ತಿ. ಹೀಗಾಗಿ ಅವರನ್ನೂ ಹಗುರವಾಗಿ ಪರಿಗಣಿಸುವಂತಿಲ್ಲ.
ಜೂನ್ ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಮೊದಲು ಭಾರತಕ್ಕೆ ಇದು ಕೊನೆಯ ಏಕದಿನ ಸರಣಿ. ಹಾಗಾಗಿ ಮಿನಿ ವಿಶ್ವಕಪ್ ಗೆ ಇದು ಪೂರ್ವಭಾವಿ ಪಂದ್ಯ ಎಂದೇ ಹೇಳಬಹುದು. ಸದ್ಯಕ್ಕೆ ಏಕದಿನ ಕ್ರಿಕೆಟ್ ನಲ್ಲಿ ಮೂರನೇ ಶ್ರೇಯಾಂಕ ಹೊಂದಿರುವ ಭಾರತ ಮತ್ತೆ ನಂ.1 ಪಟ್ಟಕ್ಕೆ ತರುವುದಾಗಿ ಕೊಹ್ಲಿ ಪಣ ತೊಟ್ಟಿದ್ದಾರೆ. ಅವರ ಆಶಯ ನಿಜವಾಗಬೇಕಾದರೆ ಭಾರತ ಅದಕ್ಕೆ ತಕ್ಕ ಆಟವಾಡಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ