Publish Date: Sun, 15 Feb 2026 (22:16 IST)
Updated Date: Sun, 15 Feb 2026 (22:20 IST)
ಕೊಲೊಂಬೊ: ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಎದುರು ಮತ್ತೊಮ್ಮೆ ಪಾಕಿಸ್ತಾನ ಮಕಾಡೆ ಮಲಗಿದೆ. ಇಂದು ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ಗಳ ಮುಂದೆ ಉಸಿರೆತ್ತದ ಪಾಕ್ ಬ್ಯಾಟಿಗರು ಸುಲಭವಾಗಿ ಸೋಲೊಪ್ಪಿಕೊಂಡಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 20 ಓವರ್ ಗಳಲ್ಲಿ 175 ರನ್ ಗಳ ಗುರಿ ನೀಡಿತ್ತು. ಪಾಕಿಸ್ತಾನ 18 ಓವರ್ ಗಳಲ್ಲಿ 114 ರನ್ ಗಳಿಗೆ ಆಲೌಟ್ ಆಗುವ ಮೂಲಕ 61 ರನ್ ಗಳ ಸೋಲು ಕಂಡಿದೆ. ಇದು ಟಿ20 ಮಾದರಿಯಲ್ಲಿ ದೊಡ್ಡ ಮೊತ್ತವೇನೂ ಅಲ್ಲ. ಹಾಗಿದ್ದರೂ ಟೀಂ ಇಂಡಿಯಾ ಗುಣಮಟ್ಟದ ಬೌಲಿಂಗ್ ಎದುರು ಪಾಕಿಸ್ತಾನ ಬ್ಯಾಟಿಗರೂ ಸ್ವಲ್ಪವೂ ಪ್ರತಿರೋಧ ತೋರದೇ ಶರಣಾದರು.
ಇದ್ದವರಲ್ಲಿ ಉಸ್ಮಾನ್ ಖಾನ್ ಮಾತ್ರ 44 ರನ್ ಗಳಿಸಿ ಮಿಂಚಿದರು. ಆದರೆ ಅನುಭವಿ ಬಾಬರ್ ಅಜಮ್ 5 ನಾಯಕ ಸಲ್ಮಾನ್ ಅಘಾ 4, ಸಯೀಂ ಅಯೂಬ್ 6, ಫರ್ಹಾನ್ ಶೂನ್ಯಕ್ಕೆ ನಿರ್ಗಮಿಸಿದರು.
ಭಾರತದ ಪರ ಹಾರ್ದಿಕ್ ಪಾಂಡ್ಯ ಮೊದಲ ಓವರ್ ನಲ್ಲೇ ವಿಕೆಟ್ ತೆಗೆದರೆ, ಬುಮ್ರಾ ಒಂದೇ ಓವರ್ ನಲ್ಲಿ 2 ವಿಕೆಟ್ ಕಬಳಿಸಿ ಆಘಾತವಿಕ್ಕಿದರು. ಬಳಿಕ ಸ್ಪಿನ್ನರ್ ಗಳ ಸರದಿ. ಅಕ್ಷರ್ ಪಟೇಲ್ 2, ಕುಲದೀಪ್ ಯಾದವ್ 1, ವರುಣ್ ಚಕ್ರವರ್ತಿ 2 ಕಬಳಿಸಿ ಪಾಕಿಸ್ತಾನದ ಅಂತ್ಯ ಹಾಡಿದರು. ಇದರೊಂದಿಗೆ ಟೂರ್ನಿ ಯಾವುದೇ ಇರಲಿ, ಸ್ಥಳ ಯಾವುದೇ ಇರಲಿ ಗೆಲುವು ನಮ್ಮದೇ ಎಂದು ಟೀಂ ಇಂಡಿಯಾ ಆಟಗಾರರು ಸಾರಿದರು.