ಮೊಹಾಲಿ: ನಾಳೆಯಿಂದ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಮೂರನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈಗಾಗಲೇ ಸರಣಿಯಲ್ಲಿ 0-1 ರಿಂದ ಹಿಂದಿರುವ ಇಂಗ್ಲೆಂಡ್ ಈ ಟೆಸ್ಟ್ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ.
ಕಳೆದ ಪಂದ್ಯದಲ್ಲಿ ಗೆದ್ದರೂ, ಟೀಂ ಇಂಡಿಯಾಕ್ಕೆ ಬ್ಯಾಟಿಂಗ್ ಸಮಸ್ಯೆ ಕಾಡುತ್ತಿದೆ. ವಿರಾಟ್ ಕೊಹ್ಲಿ ಬಿಟ್ಟರೆ ಬೇರೆ ಯಾರೂ ತಂಡಕ್ಕೆ ಆಸರೆಯಾಗುತ್ತಿಲ್ಲ. ದಿಡೀರ್ ಬ್ಯಾಟಿಂಗ್ ಕುಸಿತ ಕಾಣುತ್ತಿರುವುದು, ಆರಂಭಿಕರು ಬೇಗನೇ ಔಟಾಗುವುದರಿಂದ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಸ್ಪಿನ್ನರ್ ಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ.
ಮೊಹಾಲಿ ಕೂಡಾ ಸ್ಪಿನ್ ಮತ್ತು ಬ್ಯಾಟ್ಸ್ ಮನ್ ಗಳಿಗೆ ಸಹಕರಿಸುವ ಪಿಚ್ ಆದ್ದರಿಂದ ಟಾಸ್ ಗೆದ್ದರೆ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳುವುದು ಉತ್ತಮ. ಅತ್ತ ಇಂಗ್ಲೆಂಡ್ ಗೂ ದ್ವಿತೀಯ ಪಂದ್ಯದಲ್ಲಿ ಬ್ಯಾಟಿಂಗ್ ನದ್ದೇ ಚಿಂತೆ ಕಾಡಿತ್ತು. ಜೋ ರೂಟ್ ಮತ್ತು ಅಲೆಸ್ಟರ್ ಕುಕ್ ಬಿಟ್ಟರೆ ಇನ್ಯಾರಿಂದಲೂ ಸ್ಥಿರ ಪ್ರದರ್ಶನ ಬಂದಿಲ್ಲ.
ಕಳಪೆ ಫಾರ್ಮ್ ನಲ್ಲಿದ್ದ ಬೆನ್ ಡಕೆಟ್ ಬದಲಿಗೆ ಜೋಸ್ ಬಟ್ಲರ್ ತಂಡಕ್ಕೆ ಬಂದಿದ್ದಾರೆ. ಇದ್ದವರಲ್ಲಿ ಅದಿಲ್ ರಶೀದ್ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದಾರೆ. ಸ್ಟುವರ್ಟ್ ಬ್ರಾಡ್ ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದರೂ ದ್ವಿತೀಯ ಇನಿಂಗ್ಸ್ ನಲ್ಲಿ ಅವರು ನಿಯಮಿತವಾಗಿ ವಿಕೆಟ್ ಕಿತ್ತಿದ್ದು ಇಂಗ್ಲೆಂಡ್ ಗೆ ನೆಮ್ಮದಿ ತಂದಿದ್ದಾರೆ.
ಈಗಾಗಲೇ ವಿರಾಟ್ ಕೊಹ್ಲಿಯನ್ನು ಕಟ್ಟಿ ಹಾಕಲು ಎದುರಾಳಿಗಳು ಯೋಜನೆ ರೂಪಿಸುತ್ತಿದ್ದಾರೆ. ಕೊಹ್ಲಿ ಔಟಾದರೆ ಅರ್ಧ ಕೆಲಸ ಮುಗಿದಂತೆ ಎನ್ನುವುದು ಅವರಿಗೂ ಗೊತ್ತಾಗಿದೆ. ಹೀಗಾಗಿ ಭಾರತದ ಇತರ ಬ್ಯಾಟ್ಸ್ ಮನ್ ಗಳು ಜವಾಬ್ಧಾರಿ ನಿಭಾಯಿಸಲು ಸಿದ್ಧರಾಗಬೇಕಿದೆ. ಒಂದು ಪಂದ್ಯದಲ್ಲಿ ಗೆದ್ದ ಮಾತ್ರಕ್ಕೆ ಎದುರಾಳಿಯನ್ನು ಹಗುರವಾಗಿ ಪರಿಗಣಿಸಿದರೆ, ಇಂಗ್ಲೆಂಡ್ ಕಳೆದ ಬಾರಿ ಪ್ರವಾಸದಲ್ಲಿ ಮಾಡಿದಂತೆ ಉಳಿದೆಲ್ಲಾ ಪಂದ್ಯಗಳನ್ನು ಗೆದ್ದು ಮುಖಭಂಗ ಮಾಡೀತು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ