ಪುಣೆ: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದರೂ ಇಂಗ್ಲೆಂಡ್ ತಂಡದಿಂದ ಮೋಸದಾಟ ಆರೋಪ ಕೇಳಿಬಂದಿದೆ.
ನಿನ್ನೆ ನಡೆದ ಪಂದ್ಯವನ್ನು ಟೀಂ ಇಂಡಿಯಾ 15 ರನ್ ಗಳಿಂದ ಗೆಲ್ಲುವ ಮೂಲಕ ಸರಣಿಯ ವಶ ಮಾಡಿಕೊಂಡಿದೆ. ಆದರೆ ಈ ಪಂದ್ಯದಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿದಿದ್ದ ಹರ್ಷಿತ್ ರಾಣಾ ತಂಡದ ಚಿತ್ರಣವನ್ನೇ ಬದಲಿಸಿದ್ದು ಇಂಗ್ಲೆಂಡ್ ಮೋಸದಾಟದ ಆರೋಪ ಮಾಡಿದೆ.
ಬ್ಯಾಟಿಂಗ್ ಮಾಡುತ್ತಿದ್ದಾಗ ಟೀಂ ಇಂಡಿಯಾ ಬ್ಯಾಟಿಗ ಶಿವಂ ದುಬೆ ತಲೆಗೆ ಚೆಂಡು ಬಡಿದಿತ್ತು. ಹೀಗಾಗಿ ಅವರು ಫೀಲ್ಡಿಂಗ್ ಗಿಳಿದಿರಲಿಲ್ಲ. ಹೀಗಾಗಿ ಟೀಂ ಇಂಡಿಯಾ ಕನ್ಕ್ಯುಶನ್ ಸಬ್ ಆಟಗಾರನಿಗೆ ಮನವಿ ಮಾಡಿತು. ಸಾಮಾನ್ಯವಾಗಿ ಈ ರೀತಿ ಬದಲಿ ಆಟಗಾರನನ್ನು ಸೇರ್ಪಡೆಗೊಳಿಸುವುದಿದ್ದರೆ ಬ್ಯಾಟರ್ ನ ಬದಲು ಬ್ಯಾಟರ್, ಬೌಲರ್ ಗಾಯಗೊಂಡಿದ್ದರೆ ಆ ಸ್ಥಾನಕ್ಕೆ ಬೌಲರ್ ನನ್ನೇ ಆಯ್ಕೆ ಮಾಡಬೇಕು.
ಆದರೆ ಟೀಂ ಇಂಡಿಯಾ ಹರ್ಷಿತ್ ರಾಣಾರನ್ನು ಕರೆತಂದಿದೆ. ಇದೀಗ ಇಂಗ್ಲೆಂಡ್ ತಂಡದ ಆಕ್ಷೇಪಕ್ಕೆ ಗುರಿಯಾಗಿದೆ. ಬ್ಯಾಟರ್ ನ ಬದಲಿಗೆ ಪರಿಪೂರ್ಣ ಬೌಲರ್ ನನ್ನು ಆಯ್ಕೆ ಮಾಡಿದ್ದು ಸರಿಯಲ್ಲ ಎಂದು ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಅಸಮಾಧಾನ ಹೊರಹಾಕಿದ್ದಾರೆ. ಆಟಗಾರನನ್ನು ಅನುಮತಿಸುವ ಮುನ್ನ ರೆಫರಿಗೂ ಸ್ಪಷ್ಟತೆಯಿರಬೇಕು ಎಂದು ಕಿಡಿ ಕಾರಿದ್ದಾರೆ. ಬದಲಿಯಾಗಿ ಕಣಕ್ಕಿಳಿದಿದ್ದ ಹರ್ಷಿತ್ ರಾಣಾ 4 ಓವರ್ ಗಳಲ್ಲಿ 33 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು.