ಬೆಂಗಳೂರು: ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಸ್ಪಿನ್ನರ್ ವರುಣ್ ಚಕ್ರವರ್ತಿಗೂ ಮತ್ತು ಕರ್ನಾಟಕಕ್ಕೂ ಬಲವಾದ ನಂಟಿದೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಕೇವಲ ಮೂರು ಪಂದ್ಯಗಳನ್ನು ಆಡಿ 9 ವಿಕೆಟ್ ಪಡೆದಿರುವ 33 ವರ್ಷ ವಯಸ್ಸಿನ ವರುಣ್ ಅವರು ಹುಟ್ಟಿದ್ದು ಕರ್ನಾಟಕದ ಬೀದರ್‌ನಲ್ಲಿ. ಒಂದು ತಿಂಗಳ ಹಿಂದಷ್ಟೇ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಮಾದರಿಗೆ ಪದಾರ್ಪಣೆ ಮಾಡಿದ್ದರು.
ವರುಣ್ ತಂದೆ ವಿನೋದ್ ಚಕ್ರವರ್ತಿಯವರು ಐಟಿಎಸ್ ಅಧಿಕಾರಿಯಾಗಿ ಚೆನ್ನೈನಲ್ಲಿ ಕಾರ್ಯನಿರ್ವಹಿಸುತ್ತಾರೆ. ತಾಯಿ ಮಾಲಿನಿ ಅವರು ಕರ್ನಾಟಕದವರು. ವರುಣ್ ಬೆಳೆದಿದ್ದು ಮಾತ್ರ ಚೆನ್ನೈನಲ್ಲಿ. ದೇಶಿ ಕ್ರಿಕೆಟ್‌ನಲ್ಲಿ ತಮಿಳುನಾಡು ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಕಳೆದ ತಿಂಗಳು ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅವರು ಸ್ಪಿನ್ ಮೋಡಿಯ ಮೂಲಕ ಕಡಿಮೆ ಅವಧಿಯಲ್ಲಿ ದೇಶದ ಗಮನ ಸೆಳೆದಿದ್ದಾರೆ. ಅದಕ್ಜೂ ಮುನ್ನ ಟಿ20 ಮತ್ತು ಐಪಿಎಲ್‌ನಲ್ಲಿ ಗಮನ ಸೆಳೆದಿದ್ದರು.
ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಭಾರತ ತಂಡದಲ್ಲಿ ವರುಣ್ ಅವರನ್ನು ಕೊನೆಯ ಕ್ಷಣದಲ್ಲಿ ಸೇರ್ಪಡೆ ಮಾಡಲಾಗಿತ್ತು. ವರುಣ್ ಸೇರಿದಂತೆ ಐವರು ಸ್ಪಿನ್ನರ್‌ಗಳನ್ನು ತಂಡದಲ್ಲಿ ಇರುವುದರ ಬಗ್ಗೆಯೂ ಸಾಕಷ್ಟು ಟೀಕೆಗಳು ಕೇಳಿಬಂದಿತ್ತು. ಅದನ್ನು ಲೆಕ್ಕಿಸದೆ ರೋಹಿತ್ ಶರ್ಮಾ ಮತ್ತು ಕೋಚ್ ಗೌತಮ್ ಗಂಭೀರ್ ಅವರು ವರುಣ್‌ಗೆ ಮಣೆಹಾಕಿದ್ದರು.
ಗುಂಪು ಹಂತದ ಪಂದ್ಯದಲ್ಲಿ ಇದೇ ನ್ಯೂಜಿಲೆಂಡ್ ಎದುರು ವರುಣ್ 5 ವಿಕೆಟ್ ಗೊಂಚಲು ಗಳಿಸಿದ್ದರು. ಸೆಮಿಫೈನಲ್‌ನಲ್ಲಿ 2 ಮತ್ತು ಫೈನಲ್‌ನಲ್ಲಿ 2 ವಿಕೆಟ್‌ಗಳನ್ನು ಕಬಲಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.