Publish Date: Wed, 24 May 2023 (08:30 IST)
Updated Date: Wed, 24 May 2023 (08:57 IST)
ಚೆನ್ನೈ: ಗುಜರಾತ್ ಟೈಟನ್ಸ್ ವಿರುದ್ಧದ ಐಪಿಎಲ್ 2023 ಪ್ಲೇ ಆಫ್ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಸಿಎಸ್ ಕೆ ನಾಯಕ ಧೋನಿ ವರ್ತನೆ ಈಗ ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ.
ಸಾಮಾನ್ಯವಾಗಿ ಧೋನಿ ಮೈದಾನದಲ್ಲಿ ಕೂಲ್ ಆಗಿ ಇರುತ್ತಾರೆ. ಮಾತ್ರವಲ್ಲ, ಕ್ರೀಡಾ ಸ್ಪೂರ್ತಿ ಮರೆಯುವುದಿಲ್ಲ. ಆದರೆ ನಿನ್ನೆಯ ಪಂದ್ಯದಲ್ಲಿ ತಮ್ಮ ತಂಡದ ಮತೀಶ ಪತಿರಾನಗೆ ಬೌಲಿಂಗ್ ಅವಕಾಶ ನೀಡಲು ಬೇಕೆಂದೇ ಸಮಯ ವ್ಯರ್ಥ ಮಾಡಿದ್ದಾರೆ. ಈ ಘಟನೆ ಬಗ್ಗೆ ಸ್ವತಃ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತಿರಾನ ಕೆಲವು ಸಮಯ ಮೈದಾನದಿಂದ ಹೊರಗಿದ್ದರು. ಬಳಿಕ ಇದ್ದಕ್ಕಿದ್ದಂತೆ ಮೈದಾನಕ್ಕೆ ಬಂದು ಬೌಲಿಂಗ್ ಮಾಡಲು ಹೊರಟರು. ಆಗ ಅಂಪಾಯರ್ ಅವರಿಗೆ ಬೌಲಿಂಗ್ ಮಾಡಲು ಅವಕಾಶ ಕೊಡಲಿಲ್ಲ. ಒಬ್ಬ ಆಟಗಾರ 9 ನಿಮಿಷಕ್ಕಿಂತ ಹೆಚ್ಚು ಮೈದಾನದಿಂದ ಹೊರಗಿದ್ದರೆ ಮೈದಾನಕ್ಕೆ ಬಂದ ಮೇಲೆ ನಾಲ್ಕು ನಿಮಿಷಗಳ ಬಳಿಕವಷ್ಟೇ ಬೌಲಿಂಗ್ ಗೆ ಅವಕಾಶ ನೀಡಬಹುದು.
ಆದರೆ ಪತಿರಾನಗೆ ಬೌಲಿಂಗ್ ಅವಕಾಶ ನಿರಾಕರಿಸಿದ್ದಕ್ಕೆ ಧೋನಿ ಬೇಕೆಂದೇ ಅಂಪಾಯರ್ ಗಳ ಬಳಿ ಅವರ ನಿರ್ಧಾರ ಪ್ರಶ್ನಿಸುವ ನೆಪದಲ್ಲಿ ಮಾತುಕತೆ ನಡೆಸಿ ನಾಲ್ಕು ನಿಮಿಷಗಳ ಕಾಲ ಸಮಯ ವ್ಯರ್ಥ ಮಾಡಿದರು. ಬಳಿಕ ಪತಿರಾನಗೆ ಬೌಲಿಂಗ್ ಗೆ ಅವಕಾಶ ನೀಡಲಾಯಿತು. ಧೋನಿಯ ಈ ವರ್ತನೆ ಆಕ್ರೋಶಕ್ಕೆ ಕಾರಣವಾಗಿದೆ.